ಹಸಿದುಕೊಂಡಿದ್ದ ವ್ಯಕ್ತಿಯ ಜೊತೆ ಊಟ ಹಂಚಿ ತಿಂದ ಪೊಲೀಸ್ – ವಿಡಿಯೋ ವೈರಲ್

ತಿರುವನಂತಪುರಂ: ಹಸಿದವರಿಗೆ ಅನ್ನ ನೀಡುವುದು ಪುಣ್ಯದ ಕೆಲಸ ಎನ್ನುತ್ತಾರೆ. ಹಾಗೆಯೇ ಕೇರಳದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಹಸಿದುಕೊಂಡಿದ್ದ ಬಡ ವ್ಯಕ್ತಿಯ ಜೊತೆ ತಾವು ತಿನ್ನುತ್ತಿದ್ದ ಊಟವನ್ನು ಹಂಚಿಕೊಂಡು ತಿಂದು ಮಾನವೀಯತೆ ಮೆರೆದಿದ್ದಾರೆ.

ಕೇರಳದ ಎಸ್.ಎಸ್ ಶ್ರೀಜಿತ್(30) ಮಾನವೀಯತೆ ಮೆರೆದ ಪೊಲೀಸ್ ಅಧಿಕಾರಿ. ತಿರುವನಂತಪುರದ ಹೊರವಲಯದಲ್ಲಿ ಈ ದೃಶ್ಯವನ್ನು ಸೆರೆಹಿಡಿಯಲಾಗಿದೆ. ಸೋಮವಾರ ಇಲ್ಲಿ ನೂರಾರು ಮಂದಿ ಮುಷ್ಕರ ನಡೆಸುತ್ತಿದ್ದರು. ಹೀಗಾಗಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ತೆರೆಳಿದ್ದರು. ಆಗ ಮಧ್ಯಾಹ್ನ ಶ್ರೀಜಿತ್ ಅವರು ಊಟ ಪಾರ್ಸಲ್ ತಂದು ತಿನ್ನುತ್ತಿದ್ದರು. ಈ ವೇಳೆ ಮುಷ್ಕರದಲ್ಲಿ ಭಾಗಿಯಾಗಿದ್ದ ಓರ್ವ ಬಡ ವ್ಯಕ್ತಿ, ಶ್ರೀಜಿತ್ ಊಟ ಮಾಡುವುದನ್ನೇ ನೋಡುತ್ತಿದ್ದನು. ಆಗ ಶ್ರೀಜಿತ್ ಆತ ಹಸಿದುಕೊಂಡಿದ್ದಾನೆ ಎಂದು ತಿಳಿದ ತಕ್ಷಣ, ಬನ್ನಿ ನನ್ನೊಂದಿಗೆ ಊಟ ಮಾಡಿ ಎಂದು ಕರೆದು, ತಮ್ಮ ಊಟವನ್ನು ಆತನೊಂದಿಗೆ ಹಂಚಿ ತಿಂದರು. ಇದನ್ನೂ ಓದಿ: ಪ್ರಜ್ಞೆ ತಪ್ಪಿ ಬಿದ್ದ ಮಹಿಳೆಯನ್ನು ಹೆಗಲ ಮೇಲೆ 4 ಕಿ.ಮೀ ಹೊತ್ತುಕೊಂಡು ಹೋದ ಪೇದೆ

ಹೀಗೆ ಶ್ರೀಜಿತ್ ಅವರು ಊಟವನ್ನು ಹಂಚಿ ತಿನ್ನುತ್ತಿರುವ ದೃಶ್ಯವನ್ನು ಅವರ ಸ್ನೇಹಿತರು ವಿಡಿಯೋ ಮಾಡಿ ವಾಟ್ಸಾಪ್ ಗ್ರೂಪ್‍ನಲ್ಲಿ ಹಾಕಿದ್ದರು. ಅಲ್ಲದೆ ಫೇಸ್‍ಬುಕ್‍ನಲ್ಲೂ ಈ ವಿಡಿಯೋ ಅಪ್ಲೋಡ್ ಮಾಡಲಾಗಿತ್ತು. ತದನಂತರ ಈ ವಿಡಿಯೋ ಶೇರ್ ಆಗುತ್ತಾ ಎಲ್ಲೆಡೆ ಸಖತ್ ವೈರಲ್ ಆಗಿದೆ. ಸದ್ಯ ಶ್ರೀಜಿತ್ ಅವರು ತಮ್ಮ ಹೃದಯವೈಶಾಲ್ಯತೆಯಿಂದಲೇ ಹೀರೋ ಆಗಿಬಿಟ್ಟಿದ್ದಾರೆ. ವಿಡಿಯೋ ನೋಡಿದವರು ಪೊಲೀಸ್ ಅಧಿಕಾರಿಯ ಕಾರ್ಯಕ್ಕೆ ಸಲಾಂ ಎನ್ನುತ್ತಿದ್ದಾರೆ. ಅಷ್ಟೇ ಅಲ್ಲದೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಲೋಕನಾಥ್ ಬೆಹ್ರಾ ಅವರು ಕೂಡ ಶ್ರೀಜಿತ್ ಕಾರ್ಯವನ್ನು ಅಭಿನಂದಿಸಿದ್ದಾರೆ.

https://www.facebook.com/statepolicemediacentrekerala/videos/505185316758034/

ಈ ಬಗ್ಗೆ ಪ್ರತಿಕ್ರಿಯಿಸಿದ ಶ್ರೀಜಿತ್, ನಾನು ನನ್ನ ಊಟದ ಪಾರ್ಸಲ್ ತೆರೆಯುವಾಗ ದೂರದಲ್ಲಿ ಒಬ್ಬರು ನನ್ನನ್ನೇ ನೋಡುತ್ತಾ ನಿಂತಿದ್ದರು. ಹೀಗಾಗಿ, ಅವರಿಗೆ ಹಸಿವಾಗಿದೆ ಎಂದು ನನಗೆ ಗೊತ್ತಾಗಿ, ನಿಮ್ಮ ಊಟ ಆಯ್ತಾ ಎಂದು ಕೇಳಿದೆ. ಅದಕ್ಕೆ ಅವರು ಇಲ್ಲ ಎಂದರು. ನಾನು ನನ್ನೊಂದಿಗೆಯೇ ಊಟ ಮಾಡಿ ಬನ್ನಿ ಎಂದೆ, ಮೊದಲು ಹಿಂಜರಿದರು ಬಳಿಕ ನಾನು ಒತ್ತಾಯಿಸಿದಾಗ ನನ್ನೊಂದಿಗೆ ಊಟ ಮಾಡಿದರು ಎಂದು ತಿಳಿಸಿದ್ದಾರೆ.

ಸಾಮಾನ್ಯವಾಗಿ ಹಸಿದವರಿಗೆ ಊಟ ನೀಡುತ್ತಾರೆ. ಆದರೆ ಯಾರೋ ಪರಿಚಯವಿಲ್ಲದ ವ್ಯಕ್ತಿ ಜೊತೆ ತಾವು ತಿನ್ನುತ್ತಿದ್ದ ಊಟವನ್ನು ಹಂಚಿ ತಿನ್ನುವ ಮಂದಿ ವಿರಳ. ಶ್ರೀಜಿತ್ ಅವರು ಪರಿಚಯವಿಲ್ಲದಿದ್ದರೂ ಬಡ ವ್ಯಕ್ತಿ ಹಸಿದುಕೊಂಡಿದ್ದಾನೆ ಎಂದು ಗೊತ್ತಾಗಿ ತಕ್ಷಣ ತಮ್ಮ ಊಟವನ್ನು ಹಂಚಿ ತಿಂದು ಮಾನವೀಯತೆ ಮೆರೆದಿದ್ದಾರೆ. ಪೊಲೀಸ್ ಅಧಿಕಾರಿಯ ಈ ಹೃದಯಶೀಲತೆಗೆ ಜನರು ಮನಸೋತಿದ್ದಾರೆ.

Comments

Leave a Reply

Your email address will not be published. Required fields are marked *