ನಿಷೇಧಾಜ್ಞೆ ನಡುವೆಯೂ ತುಮಕೂರಿನಲ್ಲಿ ಪ್ರತಿಭಟನೆಗೆ ಯತ್ನ – ಗುಂಪು ಚದುರಿಸಿದ ಪೊಲೀಸರು

ತುಮಕೂರು: ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ ಇದ್ದರೂ ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ತುಮಕೂರು ನಗರದಲ್ಲಿ ಪ್ರತಿಭಟನೆಗೆ ಯತ್ನಿಸಿದವರನ್ನು ಪೊಲೀಸರು ಚದುರಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ವಿವಿಧ ಮುಸ್ಲಿಂ ಸಂಘಟನೆಗಳು, ಸಿಪಿಐ, ಸಿಐಟಿಯು ಸಂಘಟನೆಯ ಮುಖಂಡರುಗಳು ಪ್ರತಿಭಟನೆ ಮಾಡಲು ಯತ್ನಿಸಿದರು. ಜಿಲ್ಲಾಧಿಕಾರಿ ಕಚೇರಿ ಬಳಿ ಇದ್ದ ಬಿಗಿ ಪೊಲೀಸ್ ಭದ್ರತೆ ನಡುವೆಯೂ ನೂರಾರು ಜನರು ಪ್ರತಿಭಟನೆಗೆ ಸಜ್ಜಾಗಿದ್ರು. ಇದನ್ನು ಗಮನಿಸಿದ ಪೊಲೀಸರು ಪ್ರತಿಭಟನಾಕಾರರ ಗುಂಪನ್ನ ಚದುರಿಸಿದರು. ಈ ವೇಳೆ ಪೊಲೀಸರಿಗೂ ಪ್ರತಿಭಟನಾಕಾರರ ನಡುವೆ ಕೆಲಕಾಲ ಮಾತಿನ ಚಕಮಕಿ ಉಂಟಾಗಿತ್ತು. ಬಳಿಕ ಎಸ್ಪಿ ಕೋನ ವಂಶಿಕೃಷ್ಣ ಮಧ್ಯಪ್ರವೇಶಿಸಿ ಪರಿಸ್ಥಿತಿ ಶಾಂತಗೊಳಿಸಿದರು. ನಾಲ್ಕು ಜನ ಮುಖಂಡರು ಹೋಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಅನುವುಮಾಡಿಕೊಡಲಾಯಿತು.

ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಕೋನ ವಂಶಿಕೃಷ್ಣ ಕೆಲವು ಸಂಘಟನೆಗಳು ಪ್ರತಿಭಟನೆ ಮಾಡುವುದಾಗಿ ಅನುಮತಿ ಪಡೆದಿದ್ದವು. ಆದರೆ ಕಾರಣಾಂತಗಳಿಂದ 144 ಸೆಕ್ಷನ್ ಜಾರಿಯಾಯಿತು. ಹಲವರಿಗೆ ನಿಷೇಧಾಜ್ಞೆ ಬಗ್ಗೆ ಮಾಹಿತಿ ಕೊರತೆ ಇತ್ತು. ಹಾಗಾಗಿ ಪ್ರತಿಭಟನೆ ಮಾಡಲು ಬಂದಿದ್ದರು. ಅಂಥವರನ್ನ ತಡೆದು ಕಳುಹಿಸಲಾಗಿದೆ ಎಂದರು.

Comments

Leave a Reply

Your email address will not be published. Required fields are marked *