ವಿವಿಧ ಪ್ರಮಾಣ ಪತ್ರಗಳ ಸೇವೆ ನೀಡುವುದರಲ್ಲಿ ರಾಜ್ಯದಲ್ಲೇ ರಾಮನಗರ ನಂಬರ್ 1

ರಾಮನಗರ: ರಾಮನಗರ ಜಿಲ್ಲಾಡಳಿತವು ಸರ್ಕಾರಿ ಕೆಲಸ ದೇವರ ಕೆಲಸ ಎನ್ನುವುದನ್ನು ಸಾಬೀತು ಪಡಿಸುವ ಮೂಲಕ 2019ರ ನವೆಂಬರ್ ತಿಂಗಳಲ್ಲಿ ಅಟಲ್ ಜೀ ಜನಸ್ನೇಹಿ ಕೇಂದ್ರದ ಕಾರ್ಯ ಸಾಧನೆಯಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನ ಪಡೆದಿದೆ.

ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯಡಿ ಜಿಲ್ಲೆಯ ಸಾರ್ವಜನಿಕರಿಗೆ ವಿವಿಧ ಪ್ರಮಾಣ ಪತ್ರಗಳ ಸೇವೆಯನ್ನು ನೀಡುವ ಮೂಲಕ ಉತ್ತಮ ಸಾಧನೆ ಮಾಡಿದೆ. ರಾಜಕಾರಣಿಗಳ ರಾಜಕೀಯದ ಅಬ್ಬರದಿಂದ ಸಾಕಷ್ಟು ಸದ್ದು ಮಾಡಿದ್ದ ರೇಷ್ಮೆ ನಾಡು, ಇದೀಗ ಅರ್ಜಿ ವಿಲೇವಾರಿಯಲ್ಲಿಯು ಹೆಸರು ಮಾಡಿರುವುದು ವಿಶೇಷವಾಗಿದೆ.

ಅಂದಹಾಗೇ ರಾಮನಗರ ಜಿಲ್ಲೆಯ ನಾಡಕಚೇರಿಗಳಲ್ಲಿ ನವೆಂಬರ್ 2019ರಿಂದ ತಿಂಗಳಿನಲ್ಲಿ ಸ್ವೀಕರಿಸಲಾಗಿರುವ 10,708 ಅರ್ಜಿಗಳನ್ನು ನಿಗದಿತ ಅವಧಿಗಿಂತ ಮೊದಲೇ ಶೇ.97.40ರಷ್ಟು ವಿಲೇವಾರಿ ಮಾಡುವ ದಾಖಲೆ ಬರೆದಿದೆ. ಈ ಮೂಲಕ 3.88 ಸಿಗ್ಮಾ ಮೌಲ್ಯವನ್ನು ಪಡೆದಿದ್ದು, 5.0 ವಿಲೇವಾರಿ ಸೂಚ್ಯಂಕದ ಪ್ರಕಾರ ರಾಮನಗರ 6.0 ಪಟ್ಟು ನಿಗದಿತ ಅವಧಿಗಿಂತ ಮೊದಲೇ ವಿಲೇವಾರಿ ಮಾಡಿ ನವೆಂಬರ್ ನಲ್ಲಿ ರಾಜ್ಯದಲ್ಲೇ ನಂಬರ್ 1 ಆಗಿದೆ.

ಅಂದಹಾಗೇ ಅಟಲ್ ಜೀ ಜನಸ್ನೇಹಿ ಕೇಂದ್ರ ಯೋಜನೆಯು ನಾಗರಿಕರಿಗೆ ವಿವಿಧ ಸೇವೆಗಳನ್ನು ಅಟಲ್ ಜೀ ಜನಸ್ನೇಹಿ ಕೇಂದ್ರಗಳ (ನಾಡಕಚೇರಿ) ಮೂಲಕ ಸುಲಭವಾಗಿ ತಲುಪಿಸುವ ಗುರಿಯನ್ನು ಹೊಂದಿದೆ. ಅಲ್ಲದೇ ಜಾತಿ ಮತ್ತು ಆದಾಯ, ಭೂಮಿ ಮತ್ತು ಕೃಷಿಕರಿಗೆ ಸಂಬಂಧಿಸಿದ ಮತ್ತು ಸಾಮಾಜಿಕ ಭದ್ರತಾ ಪಿಂಚಣಿಗಳು, ಜಾತಿ-ಆದಾಯ ಪ್ರಮಾಣ ಪತ್ರ, ಪಡಿತರ ತಿದ್ದುಪಡಿ, ಪಹಣಿ, ಮ್ಯೂಟೇಷನ್, ಆಧಾರ್ ಅರ್ಜಿ, ತಿದ್ದುಪಡಿ ಸೇರಿದಂತೆ 25ಕ್ಕೂ ಹೆಚ್ಚಿನ ಸೇವೆಗಳನ್ನು ಒದಗಿಸುತ್ತಿದೆ.

ರಾಮನಗರ ಜಿಲ್ಲೆಗೆ ಪ್ರಥಮ ಸ್ಥಾನ ಲಭಿಸಿರುವ ಬಗ್ಗೆ ಮಾಪನ ಇಲಾಖೆಯ ಆಯುಕ್ತ ಮುನೀಶ್ ಮೌದ್ಗಿಲ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಮನಗರ ಜಿಲ್ಲಾಕಾರಿಗಳಿಗೆ ಪತ್ರ ಬರೆದಿದ್ದು, ಇದೇ ಮಾದರಿಯಲ್ಲಿ ಸರ್ಕಾರಿ ಯೋಜನೆಗಳು ನಿಗದಿತ ಅವಧಿಗೂ ಮುನ್ನ ಸಾರ್ವಜನಿಕರಿಗೆ ಸೇವೆ ನೀಡಲಿ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *