ಪಾಳುಬಿದ್ದ ನೆಲದಲ್ಲಿ ಸುಮಾರು 400 ಕ್ವಿಂಟಾಲ್ ರಾಗಿ ಬೆಳೆದ ನೆಲಮಂಗಲದ ರೈತ

– ಸಮಗ್ರ ಕೃಷಿ ಬಳಸಿ ಖಾಲಿ ಜಾಗದಲ್ಲಿ ಬಂಗಾರದ ಬೆಳೆ

ಬೆಂಗಳೂರು: ಗಗನಕ್ಕೇರಿದ್ದ ಈರುಳ್ಳಿ ಬೆಳೆಯನ್ನು ಬೆಳೆದು ರಾತ್ರೋ ರಾತ್ರಿ ಲಕ್ಷ ಲಕ್ಷ ಲಾಭ ಗಳಿಸಿ ಮಾದರಿ ರೈತನಾಗಿದ್ದ ಚಿತ್ರದುರ್ಗದ ರೈತನ ಬಳಿಕ ಇದೀಗ ನೆಲಮಂಗಲದ ರೈತ ಬರಡು ಭೂಮಿಯಲ್ಲಿ ಬಂಗಾರದಂತಹ ರಾಗಿ ಬೆಳೆದಿದ್ದಾರೆ.

ಬಹಳ ವರ್ಷಗಳಿಂದ ಪಾಳುಬಿದ್ದ ಜಮೀನನ್ನು ಪಾಲು ಪಡೆದು ಸಮಗ್ರ ಕೃಷಿ ಅನುಸರಿಸಿ, ಸುಮಾರು 400 ಕ್ವಿಂಟಾಲ್ ರಾಗಿ ಬೆಳೆದು ನೆಲಮಂಗಲದ ರೈತ ಕುಮಾರ್ ಮಾದರಿಯಾಗಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ದೊಡ್ಡಕರೇನಹಳ್ಳಿ ಗ್ರಾಮದ ಕುಮಾರ್ ಅವರು ತಮ್ಮ ಬಳಿಯಿದ್ದ 10 ಎಕ್ರೆ ಜಮೀನಿನ ಜೊತೆಗೆ ಸುಮಾರು 40 ಎಕ್ರೆಯಲ್ಲಿ ಜಮೀನಿನಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ರಾಗಿಯ ಹೊನಲನ್ನು ಮಾಡಿದ್ದಾರೆ. ಸುಮಾರು 6 ಜನರ ಬಳಿ ವಿಶ್ವಾಸದಿಂದ ಭೂಮಿಯನ್ನು 15 ಮೂಟೆ ರಾಗಿಯ ಪಾಲಿಗೆ ಪಡೆದು, ಬೇಲಿ, ಗಿಡಗಂಟೆ, ಕಳೆಯನ್ನು ತೆಗೆದು ಭೂಮಿಯನ್ನು ಹಸನು ಮಾಡುವುದರಿಂದ ಹಿಡಿದು ಕಟಾವಿನವರೆಗೆ, ಆಧುನಿಕ ಯಂತ್ರೋಪಕರಣಗಳನ್ನು ಬಳಸಿ ಕೃಷಿಯನ್ನು ಮಾಡಿ ಕುಮಾರ್ ಅವರು ಸಾಧನೆ ಮಾಡಿದ್ದಾರೆ.

ಈ ಕೃಷಿಗೆ ಸುಮಾರು 4 ಲಕ್ಷ ರೂ. ಖರ್ಚು ಮಾಡಿ, 10 ರಿಂದ 12 ಲಕ್ಷ ರೂ. ಆದಾಯ ಗಳಿಸುವ ಗುರಿಯನ್ನು ಕುಮಾರ್ ಹೊಂದಿದ್ದಾರೆ. ಸರ್ಕಾರದಿಂದಲೂ ರಾಗಿಗೆ ಒಂದು ಕ್ವಿಂಟಾಲ್‍ಗೆ 3,150 ರೂ. ಬೆಂಬಲ ಬೆಲೆ ನೀಡುವ ಭರವಸೆ ಸಿಕ್ಕಿದೆ. ಕುಮಾರ್ ಅವರು ಸಮಗ್ರ ಕೃಷಿಯ ಭಾಗವಾಗಿ ಐದು ಹಸುಗಳನ್ನು ಸಾಕಿದ್ದು, ತಮ್ಮ ಐದು ಹಸುಗಳ ಮೇವನ್ನು ಬಿಟ್ಟು ಉಳಿದ ಸುಮಾರು 2 ಲಕ್ಷದಷ್ಟು ಮೇವನ್ನು ಮಾರುವ ನಿರೀಕ್ಷೆಯನ್ನು ಕುಮಾರ್ ಹೊಂದಿದ್ದಾರೆ.

ರಾಗಿ ಬೆಳೆದು ಕೈಸುಟ್ಟುಕೊಳ್ಳುವ ಅನೇಕ ರೈತರಿಗೆ ಬರಡು ಭೂಮಿಯಲ್ಲಿ ಕೃಷಿ ಮಾಡಿ ಯಶಸ್ಸಿನ ಹಾದಿಯಲ್ಲಿರುವ ರೈತ ಕುಮಾರ್ ಮಾದರಿಯಾಗಿದ್ದಾರೆ.

Comments

Leave a Reply

Your email address will not be published. Required fields are marked *