ಹೆಣ್ಮಗುವಿಗೆ ಜನ್ಮಕೊಟ್ಟು ಬಾಣಂತಿ ಸಾವು – ಕುಂದಾಪುರದಲ್ಲಿ ವೈದ್ಯರ ವಿರುದ್ಧ ಆಕ್ರೋಶ

ಉಡುಪಿ: ಕುಂದಾಪುರ ಹೆರಿಗೆ ಆಸ್ಪತ್ರೆಯಲ್ಲಿ ಬಾಣಂತಿ ತೀವ್ರ ರಕ್ತಸ್ರಾವದಿಂದ ಮೃತಪಟ್ಟ ಘಟನೆ ನಡೆದಿದೆ. ಆಕ್ರೋಶಿತ ಕುಟುಂಬ ಸರ್ಕಾರಿ ಆಸ್ಪತ್ರೆಗೆ ಮುತ್ತಿಗೆ ಹಾಕಿದೆ.

ಉಡುಪಿ ಜಿಲ್ಲೆ ಕುಂದಾಪುರದ ಅಂಕದಕಟ್ಟೆ ನಿವಾಸಿ ಸುಧೀರ್ ದೇವಾಡಿಗ ಅವರ ಪತ್ನಿ ಸುಜಾತ ಮೃತಪಟ್ಟ ಬಾಣಂತಿ. ಸುಜಾತಾಗೆ ಸರ್ಕಾರಿ ಆಸ್ಪತ್ರೆಯಲ್ಲಿ ನಾರ್ಮಲ್ ಡೆಲಿವರಿಗೆ ವೈದ್ಯರು ಪ್ರಯತ್ನಿಸಿದ್ದರು. ಆದರೆ ಹೆರಿಗೆ ಸಂದರ್ಭ ಅಧಿಕ ರಕ್ತಸ್ರಾವವಾಗಿದೆ. ವೈದ್ಯರು ಅಧಿಕ ರಕ್ತಸ್ರಾವಕ್ಕೆ ಒಳಗಾದಾಗ ಆಕೆಯನ್ನು ಖಾಸಗಿ ಆಸ್ಪತ್ರೆಗೆ ವರ್ಗಾವಣೆ ಮಾಡಿದ್ದರು.

ಖಾಸಗಿ ಆಸ್ಪತ್ರೆಯಲ್ಲಿ ಅಧಿಕ ರಕ್ತಸ್ರಾವದಿಂದಲೇ ಬಾಣಂತಿ ಸುಜಾತಾ ಮೃತಪಟ್ಟಿದ್ದಾರೆ. ಸರ್ಕಾರಿ ಹೆರಿಗೆ ಆಸ್ಪತ್ರೆಯ ವೈದ್ಯರ ಯಡವಟ್ಟಿನಿಂದಾಗಿ ಸಾವಾಗಿದೆ ಎಂದು ಮಹಿಳೆಯ ಮನೆಯವರು ಆರೋಪಿಸಿ, ಆಸ್ಪತ್ರೆ ಮುಂದೆ ಜಮಾಯಿಸಿ ವೈದ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೆಲವು ಪ್ರಕರಣದಲ್ಲಿ ರಕ್ತಸ್ರಾವ ಹತೋಟಿಗೆ ಬರಲ್ಲ. ನಮ್ಮ ಎಲ್ಲಾ ಪ್ರಯತ್ನ ಮಾಡಿದ್ದೇವೆ ಎಂದು ವೈದ್ಯರು ಹೇಳಿದ್ದಾರೆ. ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಕುಟುಂಬಸ್ಥರು ಒತ್ತಾಯಿಸಿದ್ದಾರೆ.

ಸಂಬಂಧಿಕರಾದ ಮಂಜುಳಾ ಮಾತನಾಡಿ, ಸುಜಾತ ಹೆರಿಗೆಗೆ ಹೋಗುವ ತನಕ ಆರೋಗ್ಯವಾಗಿದ್ದರು. ಏಕಾಏಕಿ ಹೀಗಾಗಿದ್ದಕ್ಕೆ ಸರಿಯಾದ ತನಿಖೆಯಾಗಬೇಕು ಎಂದರು. ವೈದ್ಯಾಧಿಕಾರಿ ರಾಬರ್ಟ್ ರೆಬೆಲ್ಲೋ, ಮಾತನಾಡಿ ಕೆಲವು ಪ್ರಕರಣದಲ್ಲಿ ವೈದ್ಯರ ಕೈಮೀರಿ ಪರಿಸ್ಥಿತಿ ಹೋಗುತ್ತದೆ. ರಕ್ತಸ್ರಾವವನ್ನು ಹತೋಟಿಗೆ ತರಲು ಅಸಾಧ್ಯವಾಯ್ತು. ನಮ್ಮ ಕರ್ತವ್ಯ ದಲ್ಲಿ ಲೋಪವೆಸಗಿಲ್ಲ ಎಂದು ಹೇಳಿದರು.

Comments

Leave a Reply

Your email address will not be published. Required fields are marked *