ರೋಗಿಗಳಿಗೆ ಕಾರಿಡಾರಿನ ನೆಲವೇ ಗತಿ- ಲಕ್ಷ್ಮೇಶ್ವರ ಸರ್ಕಾರಿ ಆಸ್ಪತ್ರೆಯಲ್ಲಿ ನರಕಯಾತನೆ

ಗದಗ: ಸರ್ಕಾರಿ ಆಸ್ಪತ್ರೆಗಳಲ್ಲಿರೋ ಅವ್ಯವಸ್ಥೆ ಬಗ್ಗೆ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಇವುಗಳ ಸಾಲಿಗೆ ಇದೀಗ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಸರ್ಕಾರಿ ಆಸ್ಪತ್ರೆ ಕೂಡ ಸೇರಿಕೊಂಡಿದೆ. ಸೂಕ್ತ ಚಿಕಿತ್ಸೆ ಸಿಗದೆ ರೋಗಿಗಳು ಇಲ್ಲಿ ಒದ್ದಾಡುತ್ತಿದ್ದಾರೆ.

ಹೌದು. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕು ಆಸ್ಪತ್ರೆಗೆ ದಿನನಿತ್ಯ ಹತ್ತಾರು ಹಳ್ಳಿಯ ನೂರಾರು ರೋಗಿಗಳು ಚಿಕಿತ್ಸೆ ಪಡೆಯೋಕೆ ಬರುತ್ತಾರೆ. ಆದರೆ ಇಲ್ಲಿ ಬರೋ ರೋಗಿಗಳಿಗೆ ಸರಿಯಾದ ಟ್ರೀಟ್‍ಮೆಂಟ್ ಸಿಗುತ್ತಿಲ್ಲ. ಟ್ರೀಟ್‍ಮೆಂಟ್ ಬಿಡಿ, ರೋಗಿಗಳಿಗೆ ಮಲಗೋಕೆ ಒಂದ್ ಬೆಡ್ ಕೂಡ ಇಲ್ಲ. ಕ್ಲೀನಿಂಗ್ ಅಂತೂ ಮೊದಲೇ ಇಲ್ಲ. ಚಿಕನ್ ಗುನ್ಯಾ, ಮಲೇರಿಯಾ, ವಾಂತಿ, ಜ್ವರ ಏನೇ ಬರಲಿ ರೋಗಿಗಳಿಗೆ ನೆಲದ ಮೇಲೆ ಮಲಗಿಸಿ ಚಿಕಿತ್ಸೆ ಕೊಡುತ್ತಾರೆ. ರೋಗಿಯ ಕೈನಲ್ಲಿ ಸಲಾಯಿನ್ ಕೊಟ್ಟು ಕೂಡಿಸುತ್ತಾರೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಆಸ್ಪತ್ರೆಯಲ್ಲಿ ಸಿಬ್ಬಂದಿ ಹಾಗೂ ವೈದ್ಯರ ಕೊರತೆಯಿಂದ ರೋಗಿಯ ಸಂಬಂಧಿಕರೇ ತಮ್ಮ ರೋಗಿಗಳಿಗೆ ಹಾಕಿರುವ ಡ್ರಿಪ್ ತೆಗೆಯುವುದು, ಹಾಕುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ವೈದ್ಯಾಧಿಕಾರಿಗಳನ್ನ ಕೇಳಿದರೆ, ಹೊರರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಇನ್ನಷ್ಟು ವೈದ್ಯರನ್ನ ನೇಮಕ ಮಾಡುತ್ತೇವೆ. ಅಲ್ಲದೆ ಶೀಘ್ರವೇ ಕ್ರಮ ಕೈಗೊಳ್ಳುವುದಾಗಿ ಹೇಳುತ್ತಾರೆ.

ಒಟ್ಟಾರೆ ಲಕ್ಷ್ಮೇಶ್ವರ ತಾಲೂಕು ಆಸ್ಪತ್ರೆ ಅವ್ಯವಸ್ಥೆಗಳ ಆಗರವಾಗಿದೆ. ರೋಗಿಗಳ ಪಾಲಿಗೆ ಸೌಲಭ್ಯ ಇದ್ದು ಇಲ್ಲದಂತಾಗಿದೆ. ಹೀಗಾಗಿ ಇನ್ನು ಮುಂದೆಯಾದರೂ ಆರೋಗ್ಯ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತು ಆಸ್ಪತ್ರೆಯ ಸಮಸ್ಯೆ ಬಗೆಹರಿಸಲಿ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

Comments

Leave a Reply

Your email address will not be published. Required fields are marked *