ರಾಮನಗರ: ಮೈಸೂರು ಜಿಲ್ಲೆಯ ಸಾಲಿಗ್ರಾಮದಲ್ಲಿನ ದಲಿತರ ಮೇಲೆ ನಡೆದಿರುವ ದೌರ್ಜನ್ಯ ಖಂಡಿಸಿ ಜೆಡಿಎಸ್ ಶಾಸಕ ಸಾ.ರಾ ಮಹೇಶ್ ರಾಜೀನಾಮೆ ನೀಡುವಂತೆ ಆಗ್ರಹಿಸಿ ರಾಮನಗರದಲ್ಲಿ ಸಮತಾ ಸೈನಿಕ ದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ರಾಮನಗರದ ಐಜೂರು ವೃತ್ತದಲ್ಲಿ ಬೆಂಗಳೂರು – ಮೈಸೂರು ಹೆದ್ದಾರಿ ತಡೆದು ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಶಾಸಕ ಸಾ.ರಾ ಮಹೇಶ್ ಅವರ ಕುಮ್ಮಕ್ಕುನಿಂದಲೇ ದೌರ್ಜನ್ಯ ನಡೆದಿದ್ದು ನೇರ ಹೊಣೆ ಹೊತ್ತು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಶಾಸಕ ಸಾ.ರಾ ಮಹೇಶ್ ಹಾಗೂ ಅವರ ಸಹೋದರ ಸಾ.ರಾ ರವೀಶ್ ಮತ್ತು ಸಹಚರರು ದಲಿತರ ಮೇಲೆ ಗೂಂಡಾಗಿರಿ ನಡೆಸಿ ದೌರ್ಜನ್ಯ ಎಸಗಿರುವುದು ನಾಗರೀಕ ಸಮಾಜ ತಲೆ ತಗ್ಗಿಸುವಂತಾಗಿದೆ. ದೌರ್ಜನ್ಯದ ಬಳಿಕ ಶಾಸಕ ಸಾ.ರಾ ಸಹೋದರರು ತಲೆ ಮರೆಸಿಕೊಂಡಿರುವುದು ದಲಿತರಿಗೆ ಮತ್ತಷ್ಟು ಆತಂಕವನ್ನುಂಟು ಮಾಡಿದೆ.
ದಲಿತರ ಮೇಲಿನ ದೌರ್ಜನ್ಯ ನಡೆದ 24 ಗಂಟೆಗಳ ಒಳಗಾಗಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಎಂದು 2019ರಲ್ಲಿ ಸರ್ವೋಚ್ಚ ನ್ಯಾಯಾಲಯವು ನಿರ್ದೇಶನ ನೀಡಿದೆ. ಆದರೂ ಕೂಡ ಮೈಸೂರು ಪೊಲೀಸ್ ವರಿಷ್ಠ ಅಧಿಕಾರಿ ಕರ್ತವ್ಯ ಲೋಪ ಎಸಗಿದ್ದಾರೆ. ಕೂಡಲೇ ಎಸ್ಪಿಯವರನ್ನು ಅಮಾನತು ಪಡಿಸಬೇಕು ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.

ದಲಿತರ ಮೇಲಿನ ದೌರ್ಜನ್ಯ ಸಂಬಂಧ ಶಾಸಕ ಎನ್.ಮಹೇಶ್ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಆದರೆ ಸಾ.ರಾ ಮಹೇಶ್ ಮಾತ್ರ ಗ್ರಾಮಕ್ಕೆ ಭೇಟಿ ನೀಡಿ ದಲಿತರ ಸಮಸ್ಯೆ ಆಲಿಸಿಲ್ಲ. ಮತ್ತೆ ಇಂತಹ ಕೃತ್ಯ ನಡೆಸುವ ಹಿನ್ನೆಲೆಯಲ್ಲಿಯೇ ತಲೆ ಮರೆಸಿಕೊಂಡಿದ್ದಾರೆ. ಇದೀಗ ಬಂಧಿಸಿರುವ ಜನರನ್ನು ನೆಪ ಮಾತ್ರಕ್ಕೆ ದಲಿತರನ್ನು ಸಮಾಧಾನ ಮಾಡುವ ದೃಷ್ಟಿಯಿಂದ ಬಂಧಿಸಲಾಗಿದೆ. ಕೂಡಲೇ ಸಾ.ರಾ ಸಹೋದರರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

Leave a Reply