ಪ್ರಜ್ವಲ್ ರೇವಣ್ಣ ಜೆಡಿಎಸ್ ಮುಂದಿನ ನಾಯಕ?

ಬೆಂಗಳೂರು: ಲೋಕಸಭೆ, ಉಪ ಚುನಾವಣೆ ಬಳಿಕ ದೇವೇಗೌಡ್ರು ಸದ್ದಿಲ್ಲದೆ ಪಕ್ಷ ಸಂಘಟನೆಗೆ ವೇದಿಕೆ ರೆಡಿ ಮಾಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ನೆಲೆ ಇಲ್ಲದೆ ಕಂಗೆಟ್ಟಿರೋ ಪಕ್ಷದ ಬಲವರ್ಧನೆಗೆ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಬಾವುಟ ಹಾರಿಸೋಕೆ ತಮ್ಮ ಎರಡನೇ ಮೊಮ್ಮಗ ಪ್ರಜ್ವಲ್ ರೇವಣ್ಣರನ್ನ ಬಳಸಿಕೊಳ್ಳೋಕೆ ನಿರ್ಧಾರ ಮಾಡಿದ್ದಾರೆ. ಹೀಗಾಗಿ ಉತ್ತರ ಕರ್ನಾಟಕದ ಜವಾಬ್ದಾರಿಯನ್ನ ಮೊಮ್ಮಗನಿಗೆ ನೀಡಿದ್ದಾರೆ.

ತಾತ ಕೊಟ್ಟ ಆಜ್ಞೆಯನ್ನು ಪಾಲನೆ ಮಾಡೋಕೆ ಸಿದ್ದವಾಗಿರುವ ಪ್ರಜ್ವಲ್ ರೇವಣ್ಣ ಸಂಕ್ರಾಂತಿ ಬಳಿಕ ಉತ್ತರ ಕರ್ನಾಟಕ ಪ್ರವಾಸ ಕೈಗೊಳ್ಳಲಿದ್ದಾರೆ. ಒಂದು ತಿಂಗಳು ಉತ್ತರ ಕರ್ನಾಟಕ ಪ್ರವಾಸ ಕೈಗೊಂಡು ಪಕ್ಷ ಸಂಘಟನೆ, ಸದಸ್ಯ ನೊಂದಣಿ ಸೇರಿದಂತೆ ಪಕ್ಷ ಬಲವರ್ಧನೆ ಮಾಡಲಿದ್ದಾರೆ.

ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗಿದ್ದರೂ ನಿಖಿಲ್ ಪಕ್ಷ ಸಂಘಟನೆಯಲ್ಲಿ ಅಷ್ಟಾಗಿ ಆಸಕ್ತಿ ತೋರಿಸುತ್ತಿಲ್ಲ. ಹೀಗಾಗಿ ಯುವಕರು ಬೇರೆ ಪಕ್ಷದ ಕಡೆ ವಾಲುತ್ತಿದ್ದಾರೆ. ಇದನ್ನ ತಡೆಯಲು ಸಂಸದರು ಆಗಿರುವ ಪ್ರಜ್ವಲ್ ರೇವಣ್ಣನ್ನ ಬಳಸಿಕೊಳ್ಳಲು ದೌಡ್ಡಗೌಡ್ರು ಪ್ಲ್ಯಾನ್ ಮಾಡಿದ್ದಾರೆ.

ಯೂತ್ ಐಕಾನ್ ರೀತಿ ಬಿಂಬಿಸಿ ಯುವಕರನ್ನ ಸೆಳೆಯಲು ದೇವೇಗೌಡರು ಪ್ಲ್ಯಾನ್ ಮಾಡಿದ್ದಾರೆ. ಪಕ್ಷದ ಯುವಕರು ಪ್ರಜ್ವಲ್ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದು, ಮುಂದೊಂದು ದಿನ ಪ್ರಜ್ವಲ್ ಯುವ ಘಟಕ ರಾಜ್ಯಾಧ್ಯಕ್ಷ ಆದರೂ ಅಚ್ಚರಿಯಿಲ್ಲ. ಒಂದು ವೇಳೆ ಪ್ರಜ್ವಲ್ ರೇವಣ್ಣ ತಂತ್ರ ಫಲಿಸಿದ್ರೆ ದಳಕ್ಕೆ ಪ್ರಜ್ವಲ್ ರೇವಣ್ಣ ಭಾವಿ ನಾಯಕ ಆದರೂ ಅಚ್ಚರಿಯಿಲ್ಲ.

Comments

Leave a Reply

Your email address will not be published. Required fields are marked *