ಮಧುಮೇಹ, ಬೊಜ್ಜು ತಡೆಯೋದಕ್ಕೆ ಸಂಸ್ಕೃತ ಮಾತಾಡಿ: ಬಿಜೆಪಿ ಸಂಸದ

ನವದೆಹಲಿ: ಮಧುಮೇಹ, ಬೊಜ್ಜಿನಂತಹ ಸಮಸ್ಯೆಗಳನ್ನು ತಡೆಯಲು ಸಂಸ್ಕೃತ ಮಾತನಾಡಿ ಎಂದ ಬಿಜೆಪಿ ಸಂಸದರೊಬ್ಬರ ಹೇಳಿಕೆ  ಭಾರೀ ಚರ್ಚೆಗೆ ಗ್ರಾಸವಾಗಿದೆ.

ಗುರುವಾರ ಸದನದಲ್ಲಿ ಸಂಸ್ಕೃತಕ್ಕೆ ಸಂಬಂಧಿಸಿದ ಸಂವಾದದಲ್ಲಿ ಮಾತನಾಡುವ ವೇಳೆ ಬಿಜೆಪಿ ಸಂಸದ ಗಣೇಶ್ ಸಿಂಗ್ ಅವರು ಈ ಹೇಳಿಕೆ ಕೊಟ್ಟಿದ್ದಾರೆ. ನೀವು ಸಕ್ಕರೆ ಕಾಯಿಲೆ ಬರದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತಿದ್ದೀರಾ? ಬೊಜ್ಜಿನ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯಾ? ಇದನ್ನೆಲ್ಲಾ ತಡೆಯಲು ನೀವು ನಿತ್ಯ ಸಂಸ್ಕೃತ ಮಾತನಾಡಿ. ಆಗ ಈ ಕಾಯಿಲೆಗಳು ನಿಮ್ಮನ್ನು ಕಾಡುವುದಿಲ್ಲ ಎಂದು ಗಣೇಶ್ ಸಿಂಗ್ ಹೇಳಿಕೆ ನೀಡಿದ್ದಾರೆ. ಸಂಸದರ ಈ ಹೇಳಿಕೆ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿದ್ದು, ನಗೆಪಾಟಲಿಗೆ ಕಾರಣವಾಗಿದೆ.

ಅಮೆರಿಕ ಮೂಲದ ಸಂಸ್ಥೆಯೊಂದು ಈ ಬಗ್ಗೆ ಅಧ್ಯಯನ ನಡೆಸಿದೆ. ಪ್ರತಿದಿನ ಸಂಸ್ಕೃತದಲ್ಲಿ ಮಾತನಾಡುವುದರಿಂದ ಮನುಷ್ಯನ ನರಗಳಿಗೆ ಹೊಸ ಚೈತನ್ಯ ಸಿಗುತ್ತದೆ. ಇದರಿಂದ ಮಧುಮೇಹ ಹಾಗೂ ಬೊಜ್ಜು ಸಮಸ್ಯೆ ನಮ್ಮಿಂದ ದೂರ ಉಳಿಯುತ್ತದೆ ಎಂದು ಅಮೆರಿಕದವರ ಅಧ್ಯಯನದಿಂದ ಬೆಳಕಿಗೆ ಬಂದಿದೆ. ಆದ್ದರಿಂದ ಸಂಸ್ಕೃತ ಮಾತನಾಡಿ ನೀವು ಆರೋಗ್ಯವಾಗಿರಬಹುದು ಎಂದು ತಿಳಿಸಿದ್ದರು.

ಅಷ್ಟೇ ಅಲ್ಲದೆ ಕಂಪ್ಯೂಟರ್ ಕೋಡಿಂಗ್ ಬಗ್ಗೆ ಕೂಡ ಪ್ರತಿಕ್ರಿಯಿಸಿ, ಸದ್ಯ ಕಂಪ್ಯೂಟರ್ ಕೋಡಿಂಗ್ ಇಂಗ್ಲಿಷ್‍ನಲ್ಲಿದೆ. ಆದರೆ ಅದನ್ನು ಸಂಸ್ಕೃತದಲ್ಲಿ ಮಾಡಿದರೆ ದೋಷವೆಂಬುದೇ ಇರುವುದಿಲ್ಲ. ಸಂಸ್ಕೃತ ಕಂಪ್ಯೂಟರ್ ಗೆ ಹೊಂದಾಣಿಕೆ ಆಗುವ ಸೂಕ್ತ ಭಾಷೆ ಎಂದರು ಅಭಿಪ್ರಾಯ ವ್ಯಕ್ತಪಡಿಸಿದರು.

ಹಾಗೆಯೇ ವಿಶ್ವದ ಶೇ.97 ಭಾಷೆಗಳಿಗೆ ಸಂಸ್ಕೃತದ ಹಿನ್ನೆಲೆ ಇದೆ. ಕೆಲ ಇಸ್ಲಾಮಿಕ್ ಭಾಷೆಗಳ ಮೇಲೂ ಸಂಸ್ಕೃತ ಪ್ರಭಾವ ಬೀರಿದೆ. ಆದ್ದರಿಂದ ಸಂಸ್ಕೃತ ಭಾಷೆಯ ಹಿರಿಮೆ ದೊಡ್ಡದು ಎಂದು ಹೇಳಿದರು.

ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಅವರು ಈ ಬಗ್ಗೆ ಮಾತನಾಡಿ, ಸಂಸ್ಕೃತ ಭಾಷೆಗೆ ಬೇಗ ಹೊಂದಿಕೊಳ್ಳಬಹುದು, ಅಲ್ಲದೆ ಸಂಸ್ಕೃತದಲ್ಲಿ ಒಂದು ವಾಕ್ಯವನ್ನು ಹಲವು ರೀತಿಯಲ್ಲಿ ಮಾತನಾಡಬಹುದು. ಅಷ್ಟೇ ಅಲ್ಲದೆ ಇಂಗ್ಲಿಷ್‍ನ ಹಲವು ಪದಗಳು ಸಂಸ್ಕೃತದಿಂದಲೇ ಬಂದಿದೆ. ಆದ್ದರಿಂದ ಈ ಪ್ರಾಚೀನ ಭಾಷೆಗೆ ಪ್ರಾಮುಖ್ಯತೆ ಕೊಡುವುದರಿಂದ ಬೇರೆ ಯಾವ ಭಾಷೆಗಳ ಮೇಲೂ ದುಷ್ಪರಿಣಾಮಗಳು ಬೀರುವುದಿಲ್ಲ ಎಂದಿದ್ದರು.

Comments

Leave a Reply

Your email address will not be published. Required fields are marked *