ಕಲುಷಿತಗೊಂಡ ಕುರ್ಕಿ ಕೆರೆ- 3 ಲಕ್ಷಕ್ಕೂ ಅಧಿಕ ಮೀನುಗಳ ಮಾರಣಹೋಮ

ಕೋಲಾರ: ತಾಲೂಕಿನ ನರಸಾಪುರ ಬಳಿ ಇರುವ ಕುರ್ಕಿ ಕೆರೆ ಕಲುಷಿತಗೊಂಡಿದ್ದು, ಸುಮಾರು 3 ಲಕ್ಷಕ್ಕೂ ಅಧಿಕ ಮೀನುಗಳ ಮಾರಣ ಹೋಮ ನಡೆದಿದೆ.

ನೀರು ಕಲುಷಿತಗೊಂಡ ಪರಿಣಾಮ ಲಕ್ಷಾಂತರ ಮೀನುಗಳು ಕರೆಯಲ್ಲಿ ಸಾವನ್ನಪ್ಪಿವೆ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಡುವ ಕೆರೆ ಇದಾಗಿದ್ದು, ಕೆರೆಯಲ್ಲಿ ಮೀನು ಸಾಕಾಣಿಕೆ ಮಾಡಲು ಸಮೀರ್ ಖಾನ್ ಎಂಬುವವರು ಸುಮಾರು 3 ಲಕ್ಷ ರೂಪಾಯಿಗೆ ಮೀನುಗಾರಿಕೆ ಇಲಾಖೆ ಮೂಲಕ ಟೆಂಡರ್ ಪಡೆದಿದ್ದಾರೆ. ಅದರಂತೆ ತಮಿಳುನಾಡಿನಿಂದ 3 ಲಕ್ಷದಷ್ಟು ವಿವಿಧ ತಳಿಯ ಮೀನು ಮರಿಗಳನ್ನ ಎರಡು ತಿಂಗಳ ಹಿಂದೆಯೆ ಕರೆಯಲ್ಲಿ ತಂದು ಬಿಟ್ಟಿದ್ದಾರೆ. ಆದರೆ ಕಳೆದ 2 ದಿನಗಳಿಂದ ಕೆರೆಯಲ್ಲಿರುವ ಲಕ್ಷಾಂತರ ಮೀನುಗಳು ಒಂದೊಂದಾಗಿ ಮೃತಪಡುತ್ತಿವೆ.

ಮೀನುಗಳ ಸಾವಿಗೆ ಕೆರೆ ಪಕ್ಕದಲ್ಲಿರುವ ಪ್ರಕಾಶ್ ಬಸ್ ತಯಾರಿಕ ಘಟಕದಿಂದ ಕಲುಷಿತ ನೀರು ಮಿಶ್ರಣವಾಗಿರುವ ಶಂಕೆ ವ್ಯಕ್ತವಾಗಿದ್ದು, ಕಾರ್ಖಾನೆ ತ್ಯಾಜ್ಯ ನೀರು ಕೆರೆ ಸೇರಿರುವ ಪರಿಣಾಮ ಲಕ್ಷಾಂತರ ಮೀನುಗಳ ಸಾವನ್ನಪ್ಪಿರಬಹುದು ಎಂಬ ಅನುಮಾನ ಹುಟ್ಟುಕೊಂಡಿದೆ. ಮೀನುಗಳ ಸಾವಿನಿಂದ ಕೆರೆ ದರ್ವಾಸನೆ ಹೊಡೆಯುತ್ತಿದ್ದು, ಮೃತ ಮೀನುಗಳನ್ನ ಪ್ರಾಣಿ ಪಕ್ಷಿಗಳು ಕೂಡ ಸೇವಿಸದೆ ಇರುವುದು ಯಾರಾದರು ದುಷ್ಕರ್ಮಿಗಳು ವಿಷ ಪ್ರಾಶನ ಮಾಡಿದ್ದಾರ ಅನ್ನೋ ಅನುಮಾನ ಕೂಡ ಮೂಡಿದೆ.

ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿದ್ದ ಸಮೀರ್ ಅವರಿಗೆ ಇಲಾಖೆ ಸೂಕ್ತ ಪರಿಹಾರ ಕೊಡಬೇಕು ಎಂಬುದು ಸ್ಥಳೀಯರ ಮನವಿಯಾಗಿದೆ. ಅಲ್ಲದೆ ಮೀನುಗಳ ಸಾವಿಗೆ ನಿಖರವಾದ ಕಾರಣ ತಿಳಿಯದೆ ಇರುವುದರಿಂದ ಕೆರೆಯಲ್ಲಿರುವ ಹಾವು-ಏಡಿ ಸೇರಿದಂತೆ ಜಲಚರಗಳು ಮೃತಪಡುವ ಆತಂಕ ಸ್ಥಳೀಯರಲ್ಲಿ ಶುರುವಾಗಿದೆ. ಮೀನುಗಳ ಸಾವಿಗೆ ನಿಖರವಾದ ಕಾರಣ ಹುಡುಕಿ ಸಮೀರ್ ಅವರಿಗೆ ಸೂಕ್ತ ಪರಿಹಾರ ನೀಡಬೇಕು. ಇದರ ಜೊತೆಗೆ ಮತ್ತಷ್ಟು ಜಲಚರಗಳು ಮೃತಪಡುವ ಮುನ್ನ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.

Comments

Leave a Reply

Your email address will not be published. Required fields are marked *