ಏನೂ ಸಮಸ್ಯೆ ಇಲ್ಲ ಆರೋಗ್ಯವಾಗಿದ್ದೇನೆ: ಸಿದ್ದರಾಮಯ್ಯ

-ಸಿಎಂ ಭೇಟಿ ಬಳಿಕ ಮುಖಂಡರ ಸಾಲು ಸಾಲು ಟ್ವೀಟ್

ಬೆಂಗಳೂರು: ಊಹಾಪೋಹಗಳಿಗೆ ಕಿವಿಗೊಡಬೇಡಿ, ಈಗ ಏನೂ ಸಮಸ್ಯೆ ಇಲ್ಲ ಆರೋಗ್ಯವಾಗಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸರಣಿ ಟ್ವೀಟ್ ಮಾಡಿದ್ದಾರೆ.

ನಾನು ಆರೋಗ್ಯವಾಗಿದ್ದೇನೆ, ಯಾರೂ ಆತಂಕಪಡುವ ಅಗತ್ಯ ಇಲ್ಲ. ಇನ್ನೂ ಎರಡು ದಿನ ಆಸ್ಪತ್ರೆಯಲ್ಲೇ ವಿಶ್ರಾಂತಿಯಲ್ಲಿದ್ದು ಮನೆಗೆ ಮರಳುತ್ತೇನೆ. ನನ್ನ ಆರೋಗ್ಯದ ಬಗ್ಗೆ ಕಾಳಜಿಯಿಂದ ವಿಚಾರಿಸಿ, ಶೀಘ್ರ ಗುಣಮುಖರಾಗಲು ಹಾರೈಸುತ್ತಿರುವವರಿಗೆಲ್ಲ ಕೃತಜ್ಞನಾಗಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಇದಾದ ಬಳಿಕ ಎರಡನೇ ಟ್ವೀಟ್ ಮಾಡಿರುವ ಅವರು, ಹೃದಯದ ಎರಡು ರಕ್ತನಾಳಗಳು 19 ವರ್ಷಗಳ ಹಿಂದೆ ಬ್ಲಾಕ್ ಆಗಿದ್ದ ಕಾರಣ ಸ್ಟಂಟ್ ಹಾಕಿದ್ದರು. ಕ್ರಿಯಾಶೀಲನಾಗಿ ಓಡಾಡುತ್ತಿದ್ದರೂ ಏನೂ ಆಗಿರಲಿಲ್ಲ. ಈಗ ಒಂದು ರಕ್ತ ನಾಳ ಬ್ಲಾಕ್ ಆಗಿರುವುದು ಆಂಜಿಯೋಗ್ರಾಮ್ ನಲ್ಲಿ ಗೊತ್ತಾಯಿತು. ಅದಕ್ಕಾಗಿ ಆಂಜಿಯೋ ಪ್ಲಾಸ್ಟಿ ಮಾಡಿದ್ದಾರೆ. ಈಗ ಏನೂ ಸಮಸ್ಯೆ ಇಲ್ಲ ಆರೋಗ್ಯವಾಗಿದ್ದೇನೆ ಎಂದು  ಸ್ಪಷ್ಟಪಡಿಸಿದ್ದಾರೆ.

ಊಹಾಪೋಹಗಳಿಗೆ ಕಿವಿಗೊಡಬೇಡಿ. ಈಗಲೇ ಮನೆಗೆ ಹೋಗಬಹುದು. ಅಲ್ಲಿ ನೋಡಲು ಬರುವ ಜನರ ಸಂಖ್ಯೆ ಜಾಸ್ತಿಯಾಗುತ್ತದೆ. ಹೀಗಾಗಿ ಎರಡು ದಿನ ಇಲ್ಲೇ ಇರುತ್ತೇನೆ. ಸದ್ಯ ಯಾರೂ ಅಸ್ಪತ್ರೆಗೆ ಬರುವುದು ಬೇಡ. ಮನೆಗೆ ಮರಳಿದ ಬಳಿಕ ಬನ್ನಿ. ನನ್ನ ಆರೋಗ್ಯ ವಿಚಾರಿಸಲು ಬಂದಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಸಚಿವರಾದ ಕೆ.ಎಸ್.ಈಶ್ವರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರಿಗೆ ಕೃತಜ್ಞತೆಗಳು. ರಾಜಕೀಯ ಭಿನ್ನಾಭಿಪ್ರಾಯ ವೈಯಕ್ತಿಕ ಸ್ನೇಹಕ್ಕೆ ಅಡ್ಡಿಯಾಗಬಾರದು ಎಂದು ನಂಬಿಕೊಂಡು ಬಂದವನು ನಾನು ಎಂದು ಟ್ವೀಟ್ ಮಾಡಿದ್ದಾರೆ.

ಸಿದ್ದರಾಮಯ್ಯ ಅವರನ್ನು ಸಿಎಂ ಬಿಎಸ್ ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ, ಬಸವರಾಜ ಬೊಮ್ಮಾಯಿ ಅವರು ಇಂದು ಆಸ್ಪತ್ರೆಗೆ ಹೋಗಿ ಭೇಟಿ ಮಾಡಿದ್ದರು. ಇದಾದ ಬಳಿಕ ಹಲವಾರು ಬಿಜೆಪಿ ನಾಯಕರು ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಅವರು ಕೂಡ ಟ್ವೀಟ್ ಮಾಡಿ ಸಿದ್ದರಾಮಯ್ಯ ಅವರನ್ನು ಹಾರೈಸಿದ್ದರು.

Comments

Leave a Reply

Your email address will not be published. Required fields are marked *