ಇಂಗ್ಲೆಂಡ್‍ನಿಂದ ನೇಪಾಳಕ್ಕೆ ಓಡುತ್ತಿರುವ 73 ವರ್ಷದ ವೃದ್ಧೆ

– ಭೂಕಂಪ ಸಂತ್ರಸ್ತರ ಕುಟುಂಬಗಳಿಗೆ ನೆರವು ಸಂಗ್ರಹ

ಇಸ್ತಾಂಬುಲ್: ಭೂಕಂಪ ಸಂತ್ರಸ್ತರ ಕುಟುಂಬಗಳಿಗೆ ನೆರವು ನೀಡಲು ಬ್ರಿಟನ್‍ನ 73 ವರ್ಷದ ರೋಸಿ ಸ್ವೆಲ್ ಪೋಪ್ ಅವರು ಇಂಗ್ಲೆಂಡ್‍ನಿಂದ ನೇಪಾಳಕ್ಕೆ ಓಡುತ್ತಿದ್ದಾರೆ.

‘ರನ್ ರೋಸಿ ರನ್’ ಅಭಿಯಾನದ ಅಡಿ 2018ರಲ್ಲಿ ವಿಶ್ವದಾದ್ಯಂತ ಓಡಲು ಪ್ರಾರಂಭಿಸಿದೆ. ರಾತ್ರಿ ವೇಳೆ ನಾನು ಎಲ್ಲಿ ಮಲಗುತ್ತೇನೆ ಎನ್ನುವುದು ನನಗೆ ಗೊತ್ತಿಲ್ಲ. ಕೆಲವೊಮ್ಮೆ ಹೊಲದಲ್ಲಿ, ಬೀದಿಗಳಲ್ಲಿ ಮಲಗುತ್ತೇನೆ. ಮತ್ತೆ ಬೆಳಿಗ್ಗೆ ಎದ್ದು ಓಡಲು ಪ್ರಾರಂಭಿಸಿ, ಮಾರ್ಗ ಮಧ್ಯೆ ಭೇಟಿಯಾಗುವ ಜನರನ್ನು ಮಾತನಾಡಿ ಮುಂದೆ ಸಾಗುತ್ತೇನೆ ಎಂದು ರೋಸಿ ಹೇಳಿದ್ದಾರೆ.

ರೋಸಿ ತಮಗೆ ಬೇಕಾದ ವಸ್ತುಗಳನ್ನು ಟ್ರಾಲಿಯಲ್ಲಿ ಇಟ್ಟುಕೊಂಡಿದ್ದಾರೆ. ಅದನ್ನು ತಮ್ಮ ಸೊಂಟಕ್ಕೆ ಕಟ್ಟಿಕೊಂಡು ಓಡುತ್ತಾರೆ. ಈವರೆಗೆ ರೋಸಿ 12 ದೇಶಗಳನ್ನು ದಾಟಿದ್ದು, ಭಾನುವಾರ ಇಸ್ತಾಂಬುಲ್ ತಲುಪಿದ್ದಾರೆ. ಪ್ರತಿದಿನ ಸುಮಾರು 20 ಕಿ.ಮೀ ಓಡುವ ಅವರು, ಭೂಕಂಪ ಸಂತ್ರಸ್ತರ ಕುಟುಂಬಗಳಿಗೆ ನೆರವು ನೀಡುವಂತೆ ಮಾರ್ಗ ಮಧ್ಯೆ ಸಿಗುವ ಜನರಿಗೆ ಕೇಳಿಕೊಳ್ಳುತ್ತಾರೆ.

ರೋಸಿ ತಮ್ಮ ಪ್ರಯಾಣದ ಉದ್ದಕ್ಕೂ ಸಿಗುವ ಜನರೊಂದಿಗೆ ಪರಿಚಯ ಮಾಡಿಕೊಳ್ಳುತ್ತಾರೆ. ಹೀಗಾಗಿ ಪ್ರಪಂಚದಾದ್ಯಂತ ಸಂಬಂಧಗಳನ್ನು ಬೆಳೆಸಿಕೊಂಡಿದ್ದಾರೆ. ರೋಸಿ ತಮ್ಮ ಪ್ರಯಾಣ ಹಾಗೂ ಮಾರ್ಗ ಮಧ್ಯೆ ಸಿಗುವ ವ್ಯಕ್ತಿಗಳ ಜೊತೆಗಿರುವ ವಿಡಿಯೋ, ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ರೋಸಿ ಅವರನ್ನು ವಿಶ್ವದ ಅತಿ ದೂರದ ಏಕವ್ಯಕ್ತಿ ಓಟಗಾರರಲ್ಲಿ ಒಬ್ಬರೆಂದು ಗುರುತಿಸಲಾಗಿದೆ. ಅವರು ಚಾರಿಟಿಗಾಗಿ ಹಣವನ್ನು ಸಂಗ್ರಹಿಸಲು 2004ರಲ್ಲಿ ಪ್ರಪಂಚದಾದ್ಯಂತ ಓಡಲು ಆರಂಭಿಸಿದರು. ರೋಸಿ 2015ರಲ್ಲಿ ಅಮೆರಿಕಾದಾದ್ಯಂತ ಓಡಿದ್ದಾರೆ. ರೋಸಿ ಅವರ ಪತಿ ಕ್ಲೈವ್ ಪ್ರಾಸ್ಟೇಟ್ ಕ್ಯಾನ್ಸರ್ ನಿಂದ ನಿಧನರಾದರು. ಹೀಗಾಗಿ ಪತಿಯ ಗೌರವಾರ್ಥವಾಗಿ ರೋಸಿ ನ್ಯೂಯಾರ್ಕ್ ನಿಂದ ಸ್ಯಾನ್ ಫ್ರಾನ್ಸಿಸ್ಕೋ ವರೆಗೂ ಓಡಿದ್ದರು.

Comments

Leave a Reply

Your email address will not be published. Required fields are marked *