ಕಳ್ಳಿಯೆಂದು ಚಿಂದಿ ಆಯುವ ಗರ್ಭಿಣಿಗೆ ಹಿಗ್ಗಾಮುಗ್ಗ ಥಳಿಸಿದ ಕ್ರೂರಿಗಳು

ಬಾಗಲಕೋಟೆ: ಕಳ್ಳತನ ಮಾಡೋದಕ್ಕೆ ಬಂದಿದ್ದಾರೆ ಎಂದು ಆರೋಪಿಸಿ ಚಿಂದಿ ಆಯುವ ಇಬ್ಬರು ಮಹಿಳೆಯರಿಗೆ ಯುವಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅವರಲ್ಲಿ ಓರ್ವ ಗರ್ಭಿಣಿ ಇದ್ದರೂ ಕರುಣೆ ತೋರದೆ ಮನಬಂದಂತೆ ಕ್ರೂರಿಗಳು ಹಲ್ಲೆ ನಡೆಸಿದ್ದಾರೆ.

ಜಿಲ್ಲೆಯ ಜಮಖಂಡಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಚಿಂದಿ ಆಯುವ ಮಹಿಳೆಯರ ಮೇಲೆ ದುಷ್ಕರ್ಮಿಗಳು ಪ್ರತಾಪ ತೋರಿದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಚಿಂದಿ ಆಯ್ದುಕೊಂಡು ಹೋಗುತ್ತಿದ್ದ ಮಹಿಳೆಯರಿಗೆ ಕೆಲ ಯುವಕರು ಮನಬಂದಂತೆ ಥಳಿಸಿದ್ದಾರೆ. ಕಳ್ಳತನ ಮಾಡೋದಕ್ಕೆ ಇಲ್ಲಿಗೆ ಬಂದಿದ್ದೀರಾ ಎಂದು ಆರೋಪಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಮಹಿಳೆಯರ ಮೇಲೆ ಹಲ್ಲೆ ಮಾಡಲಾಗಿದೆ.

ಗರ್ಭಿಣಿಯಿದ್ದಾಳೆ ದಯವಿಟ್ಟು ಹೊಡಿಬೇಡಿ ಎಂದು ಮಹಿಳೆ ಕೈ ಮುಗಿದು ಕೇಳಿದರೂ ಪಾಪಿಗಳು ಕರುಣೆ ತೋರದೆ ಥಳಿಸಿದ್ದಾರೆ. ಮಹಿಳೆಯರ ಕೂದಲು ಹಿಡಿದು ಹೊಡೆದಿದ್ದಲ್ಲದೆ, ಕಾಲಿನಿಂದ ಒದ್ದು, ಹಗ್ಗದಿಂದಲೂ ಹೊಡೆದು ಕ್ರೂರಿಗಳು ಹಲ್ಲೆ ಮಾಡಿದ್ದಾರೆ. ಹೊಟ್ಟೆಪಾಡಿಗೆ ಹೀಗೆ ಮಾಡಿದೆವು ತಪ್ಪಾಯ್ತು ಬಿಟ್ಟುಬಿಡಿ ಎಂದು ಬೇಡಿಕೊಂಡರೂ ದುಷ್ಕರ್ಮಿಗಳು ಥಳಿಸಿದ್ದಾರೆ. ಈ ಎಲ್ಲಾ ದೃಶ್ಯಗಳನ್ನು ಸ್ಥಳೀಯರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

Comments

Leave a Reply

Your email address will not be published. Required fields are marked *