ಮನುಷ್ಯರಂತೆಯೇ ಬಟ್ಟೆ ತೊಳೆಯುತ್ತೆ ಚಿಂಪಾಜಿ

– ಹೇಳಿಕೊಡದಿದ್ದರೂ, ನೋಡಿಯೇ ಕಲಿತ ಬುದ್ಧಿವಂತ

ನವದೆಹಲಿ: ಬುದ್ಧಿವಂತ ಪ್ರಾಣಿ, ಮನುಷ್ಯರು ಮಾಡಿದ್ದನ್ನು ಅನುಸರಿಸುವ ಪ್ರಾಣಿ ಎಂದು ಕರೆಸಿಕೊಳ್ಳುವ ಚಿಂಪಾಂಜಿ ಪಝಲ್ ಸೇರಿದಂತೆ ವಿವಿಧ ರೀತಿಯ ಚಟುವಟಿಕೆ ಮಾಡುವುದನ್ನು ನೋಡಿದ್ದೀರಿ. ಇದೀಗ ಮಾನವರಂತೆ ಬಟ್ಟೆಯನ್ನೂ ತೊಳೆದಿದ್ದು, ವಿಡಿಯೋ ಸಖತ್ ವೈರಲ್ ಆಗಿದೆ.

ಚೀನಾದ ಚಾಂಗ್ಕಿಂಗ್‍ನ ಲೆಹೆ ಲೆಡು ಥೀಮ್ ಪಾರ್ಕ್ ನಲ್ಲಿರುವ ಯೂಹುಯಿ ಎಂಬ 18 ವರ್ಷದ ಚಿಂಪಾಂಜಿ ಮನುಷ್ಯರಂತೆ ಬಟ್ಟೆ ತೊಳೆದ ವಿಡಿಯೋ ವೈರಲ್ ಆಗಿದೆ. ಆಗಸ್ಟ್‍ನಲ್ಲಿ ಈ ವಿಡಿಯೋವನ್ನು ಅಪ್‍ಲೋಡ್ ಮಾಡಲಾಗಿದೆ. ಇದಕ್ಕೆ ಸಾವಿರಾರು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹೇಳಿಕೊಟ್ಟಿದ್ದನ್ನು ಬೇಗ ಕಲಿಯುವ ಪ್ರಾಣಿ ಚಿಂಪಾಜಿ. ಕೆಲವು ಸಲ ಮನುಷ್ಯರು ಮಾಡುವ ಕೆಲಸವನ್ನು ನೋಡಿಯೂ ಕಲಿಯುತ್ತದೆ. ಹೇಳಿಕೊಡದಿದ್ದರೂ ಈ ಯೂಹುಯಿ ಮನುಷ್ಯರು ಬಟ್ಟೆ ತೊಳೆಯುವುದನ್ನು ಕಂಡು ತಾನೂ ಸಹ ಅದೇ ರೀತಿ ಬಟ್ಟೆ ತೊಳೆಯುತ್ತದೆ. ಇದನ್ನು ಅಲ್ಲಿನ ಸ್ಥಳೀಯರು ವಿಡಿಯೋ ಮಾಡಿದ್ದು, ಸಾಕಷ್ಟು ಸದ್ದು ಮಾಡುತ್ತಿದೆ.

ಚಿಂಪಾಂಜಿಗಳ ಜಾಣ್ಮೆ ಪ್ರದರ್ಶಿಸುವ ವಿಡಿಯೋಗಳು ಹಾಗೂ ಪಝಲ್ ಆಡುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿವೆ. ಇದೀಗ ಮನುಷ್ಯರಂತೆ ಬಟ್ಟೆ ತೊಳೆಯುವ ಮೂಲಕ ಯೂಹುಯಿ ಚಿಂಪಾಂಜಿ ನೆಟ್ಟಿಗರನ್ನು ಸೆಳೆದಿದೆ. ಮನುಷ್ಯರು ಯಾವ ರೀತಿ ಬಟ್ಟೆಯನ್ನು ತೊಳೆಯುತ್ತಾರೆಯೋ ಅದೇ ರೀತಿ ವ್ಯವಸ್ಥಿತವಾಗಿ ಈ ಚಿಂಪಾಂಜಿ ತೊಳೆಯುತ್ತದೆ. ಚಿಂಪಾಜಿ ಬಟ್ಟೆ ತೊಳೆಯುವ ವಿಡಿಯೋ ಕಂಡ ನೆಟ್ಟಿಗರು ಆಶ್ಚರ್ಯಗೊಂಡಿದ್ದಾರೆ. ಅಲ್ಲದೆ ಚಿಂಪಾಂಜಿಯ ಕಾರ್ಯವೈಖರಿ ಕಂಡು ಸಾವಿರಾರು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚಿಂಪಾಂಜಿ 30 ನಿಮಿಷಗಳ ಕಾಲ ಬಟ್ಟೆ ತೊಳೆಯುವ ವಿಡಿಯೋವನ್ನು ಚಿತ್ರೀಕರಿಸಲಾಗಿದೆ. ಕೀಪರ್ ಚಿಂಪಾಂಜಿ ಮುಂದೆ ಟಿ-ಶರ್ಟ್, ಸೋಪ್ ಹಾಗೂ ಬ್ರಷ್ ತಂದಿಡುತ್ತಾರೆ. ಯೂಹುಯಿ ಅಗಸನ ರೀತಿಯಲ್ಲಿ ಸೋಪ್ ಹಾಗೂ ಬ್ರಷ್ ತೆಗೆದುಕೊಂಡು ಬಟ್ಟೆ ತೊಳೆಯುತ್ತದೆ.

ಬಟ್ಟೆ ತೊಳೆಯುವುದನ್ನು ಯೂಹುಯಿಗೆ ನಾನೆಂದೂ ಹೇಳಿಕೊಟ್ಟಿರಲಿಲ್ಲ. ಆದರೆ ನಾನು ಬಟ್ಟೆ ತೊಳೆಯುವುದನ್ನು ನೋಡಿದ್ದ. ಸ್ವತಃ ಅವನೇ ಬಟ್ಟೆ ತೊಳೆದಿದ್ದನ್ನು ಕಂಡು ಆಶ್ಚರ್ಯಚಿಕಿತನಾಗಿದ್ದೇನೆ. ಯೂಹುಯಿ ಕೇವಲ ಬಟ್ಟೆ ತೊಳೆಯುವುದು ಮಾತ್ರವಲ್ಲ, ಒಂಟಿ ಕಾಲಲ್ಲಿ ನಿಲ್ಲುವುದು, ಬೆರಳುಗಳ ಮೂಲಕ ಹೃದಯದ ಸಂಕೇತ ಮಾಡುವುದು ಸೇರಿದಂತೆ ವಿವಿಧ ರೀತಿಯ ಆಕ್ಷನ್ ಮಾಡುತ್ತಾನೆ ಎಂದು ಕೀಪರ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

https://www.youtube.com/watch?time_continue=1&v=myy6bfs4tf4&feature=emb_title

Comments

Leave a Reply

Your email address will not be published. Required fields are marked *