ಪಬ್ಲಿಕ್ ಟಿವಿ ವರದಿಗೆ ಸ್ಪಂದನೆ – ಶಿಕ್ಷಕಿಗೆ ಕರೆ ಮಾಡಿ ಕಷ್ಟ ಆಲಿಸಿದ ಸುರೇಶ್ ಕುಮಾರ್

ರಾಯಚೂರು: ಬುದ್ಧಿಮಾಂದ್ಯ ಮಗಳ ಆರೈಕೆಗಾಗಿ ವರ್ಗಾವಣೆ ರದ್ದು ಕೋರಿ ಕಚೇರಿಯಿಂದ ಕಚೇರಿಗೆ ಅಲೆದಾಡಿದ್ದ ರಾಯಚೂರಿನ ಶಿಕ್ಷಕಿಯ ಅಳಲು ಕೊನೆಗೂ ಸರ್ಕಾರದ ಕಿವಿ ಮುಟ್ಟಿದೆ.

ಪಬ್ಲಿಕ್ ಟಿವಿ ವರದಿಯನ್ನ ಗಮನಿಸಿ ಸ್ವತಃ ಶಿಕ್ಷಣ ಸಚಿವ ಸುರೇಶ್ ಕುಮಾರ್ ಶಿಕ್ಷಕಿ ಶಾಂತಲಕ್ಷ್ಮಿಗೆ ಮೊಬೈಲ್ ಕರೆ ಮಾಡಿ ಕಷ್ಟ ಆಲಿಸಿದ್ದಾರೆ. ಸಮಸ್ಯೆಯ ಕುರಿತು ವಿಚಾರಿಸಿ ಸಂಪೂರ್ಣ ವಿವರವನ್ನು ಮೆಸೇಜ್ ಮೂಲಕ ಕಳುಹಿಸಲು ಹೇಳಿದ್ದು, ಕೋರಿಕೆಯಂತೆ ವರ್ಗಾವಣೆ ರದ್ದುಗೊಳಿಸುವುದಾಗಿ ಸಚಿವ ಸುರೇಶ್ ಕುಮಾರ್ ಭರವಸೆ ನೀಡಿದ್ದಾರೆ. ಸ್ವತಃ ಸಚಿವರೇ ಫೋನ್ ಮಾಡಿ ಭರವಸೆ ನೀಡಿದ್ದು ನನಗೆ ಧೈರ್ಯ ತಂದಿದೆ ಎಂದು ಶಿಕ್ಷಕಿ ಶಾಂತಾಲಕ್ಷ್ಮಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ರಾಯಚೂರು ನಗರದ ಜಹೀರಾಬಾದ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಶಾಂತಾಲಕ್ಷ್ಮಿ ಅವರನ್ನು ರಾಯಚೂರಿನಿಂದ ಸುಮಾರು 25 ಕಿ.ಮೀ ದೂರದ ಮಟಮಾರಿ ಗ್ರಾಮಕ್ಕೆ ವರ್ಗಾವಣೆ ಮಾಡಲಾಗಿತ್ತು. ಆದರೆ ಪತಿಯನ್ನು ಕಳೆದುಕೊಂಡು ಶಿಕ್ಷಕಿ ವೃತ್ತಿ ಮಾಡುತ್ತಲೇ ಮಾನಸಿಕ ಅಸ್ವಸ್ಥ ಮಗಳನ್ನು ಸಾಕುತ್ತಿರುವ ಶಿಕ್ಷಕಿ ಶಾಂತಾಲಕ್ಷ್ಮಿ ಏಕಾಏಕಿ ಮಾಡಲಾದ ವರ್ಗಾವಣೆಯನ್ನ ವಿರೋಧಿಸಿ, ವರ್ಗಾವಣೆ ರದ್ದುಗೊಳಿಸುವಂತೆ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದರು.

ಕಡ್ಡಾಯ ವರ್ಗಾವಣೆ ಮಾಡಬೇಕಾದರೂ ಒಂದೇ ಜಾಗದಲ್ಲಿ ಕನಿಷ್ಠ 10 ವರ್ಷ ಸೇವೆ ಸಲ್ಲಿಸಿರಬೇಕು. ಆದರೆ ಶಾಂತಲಕ್ಷ್ಮಿ 8 ವರ್ಷಗಳಿಂದ ಇದೇ ಶಾಲೆಯಲ್ಲಿ ಸೇವೆ ಮಾಡುತ್ತಿದ್ದು, ಇನ್ನೂ ಎರಡು ವರ್ಷ ಬಾಕಿಯಿರುವಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿ ವರ್ಗಾವಣೆ ಮಾಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ನಗರ ಪ್ರದೇಶದಿಂದ ನಿಯಮ ಉಲ್ಲಂಘಿಸಿ ಗ್ರಾಮೀಣ ಭಾಗಕ್ಕೆ ವರ್ಗಾವಣೆ ಮಾಡಿದ್ದರ ಕುರಿತು ಪಬ್ಲಿಕ್ ಟಿವಿ ವರದಿ ಮಾಡಿತ್ತು. ಇದನ್ನು ಗಮನಿಸಿದ ಶಿಕ್ಷಣ ಸಚಿವರು ಕೂಡಲೇ ಸ್ಪಂದಿಸಿದ್ದು ವರ್ಗಾವಣೆ ರದ್ದುಗೊಳಿಸುವ ಭರವಸೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *