ಪಶುವೈದ್ಯೆ ಅತ್ಯಾಚಾರಿಗಳನ್ನು ಎನ್‍ಕೌಂಟರ್ ಮಾಡಿದ್ದು ಸರಿಯಲ್ಲ: ಕಾರ್ತಿ ಚಿದಂಬರಂ

ನವದೆಹಲಿ: ಹೈದರಾಬಾದ್ ಪಶುವೈದ್ಯೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಕೊಲೆಗೈದಿದ್ದ ಆರೋಪಿಗಳನ್ನು ಎನ್‍ಕೌಂಟರ್ ಮಾಡಿದ್ದಕ್ಕೆ ದೇಶದಲ್ಲಿ ಖುಷಿ ವ್ಯಕ್ತವಾಗಿದೆ. ಪೊಲೀಸರ ಕಾರ್ಯಕ್ಕೆ ಭಾರೀ ಮಟ್ಟದಲ್ಲಿ ಶ್ಲಾಘನೆ ವ್ಯಕ್ತವಾಗಿದೆ. ಈ ಮಧ್ಯೆ ಕೆಲವರು ಎನ್‍ಕೌಂಟರ್ ಬಗ್ಗೆ ಅಪಸ್ವರ ಎತ್ತಿದ್ದಾರೆ. ಕಾಂಗ್ರೆಸ್ ಮುಖಂಡ ಕಾರ್ತಿ ಚಿದಂಬರಂ ಕೂಡ ಎನ್‍ಕೌಂಟರ್ ಮಾಡಿದ್ದು ಸರಿಯಲ್ಲ ಎಂದು ಹೇಳಿದ್ದಾರೆ.

ಶಾದ್‍ನಗರದ ಚಟಾನ್‍ಪಲ್ಲಿ ಬ್ರಿಡ್ಜ್ ಮೇಲೆ ಆರೋಪಿಗಳು ಪರಾರಿಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ನಾಲ್ವರು ಅತ್ಯಾಚಾರಿಗಳ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ತೀವ್ರ ಗಾಯಗೊಂಡ ಇವರನ್ನು ಆಸ್ಪತ್ರೆಗೆ ದಾಖಲು ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದನ್ನೂ ಓದಿ: ಎನ್‍ಕೌಂಟರ್ ‘ಯೋಜಿತ ಕೊಲೆ’, ಅಂಗಾಂಗಳ ಮೇಲೆ ಶೂಟ್ ಮಾಡಿದ್ದು ಯಾಕೆ – 4 ಪ್ರಶ್ನೆ ಮುಂದಿಟ್ಟ ಮಾನವಹಕ್ಕುಗಳ ಸಂಸ್ಥೆ

ಈ ಕುರಿತು ಟ್ವೀಟ್ ಮಾಡಿರುವ ಕಾರ್ತಿ ಚಿದಂಬರಂ, ಅತ್ಯಾಚಾರವು ಘೋರ ಅಪರಾಧ. ಇಂತಹ ಪ್ರಕರಣಗಳು ಕಾನೂನಿನ ನಿಬಂಧನೆಗಳ ಅಡಿಯಲ್ಲೇ ಇತ್ಯರ್ಥವಾಗಬೇಕು. ಈ ದುಷ್ಕೃತ್ಯದ ಆರೋಪಿಗಳ ಬಗ್ಗೆ ಬಗ್ಗೆ ನನಗೆ ಯಾವುದೇ ಅನುಕಂಪವಿಲ್ಲ. ಎನ್‍ಕೌಂಟರ್ ನಮ್ಮ ವ್ಯವಸ್ಥೆಗೆ ಕಳಂಕವಾಗಿದೆ. ತ್ವರಿತ ನ್ಯಾಯದ ಪ್ರಚೋದನೆಯನ್ನು ನಾನು ಅರ್ಥಮಾಡಿಕೊಂಡಿದ್ದರೂ, ಇದು ಸರಿಯಾದ ಮಾರ್ಗವಲ್ಲ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ತೆಲಂಗಾಣ ಎನ್‍ಕೌಂಟರ್: ಕೇಜ್ರಿವಾಲ್, ಶಶಿ ತರೂರ್, ಮನೇಕಾ ಗಾಂಧಿ ಅಪಸ್ವರ

ಕಾರ್ತಿ ಚಿದಂಬರಂ ಹೇಳಿಕೆ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿದೆ. ಅತ್ಯಾಚಾರಿಗಳನ್ನು ಅಷ್ಟೇ ಅಲ್ಲ ಭ್ರಷ್ಟ ರಾಜಕಾರಣಿಗಳನ್ನು ಎನ್‍ಕೌಂಟರ್ ಮಾಡಬೇಕು ಎಂದು ನೆಟ್ಟಿಗರೊಬ್ಬರು ಕಿಡಿಕಾರಿದ್ದಾರೆ. ಮತ್ತೊಬ್ಬರು ರಿಟ್ವೀಟ್ ಮಾಡಿ, ರಾಜಕಾರಣಿಯಾಗಿ ನೀವು ಹೇಳುತ್ತಿರುವುದು ಎಷ್ಟು ಸರಿ? ನಿಮ್ಮ ಕುಟುಂಬದವರಿಗೆ ಈ ರೀತಿ ಆಗಿದ್ದರೆ ಸುಮ್ಮನಿರುತ್ತಿದ್ದಿರಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: 2008 ವಾರಂಗಲ್ ಎನ್‌ಕೌಂಟರ್‌ನಂತೆ ದಿಶಾ ‘ಹತ್ಯಾಚಾರಿ’ಗಳ ಹುಟ್ಟಡಗಿಸಿದ ವಿ.ಸಿ ಸಜ್ಜನರ್

ಕಾಂಗ್ರೆಸ್ ವಕ್ತಾರ ಸಂಜಯ್ ಝಾ ಬಾಳೆ ಹಣ್ಣು ಫೋಟೋ ಟ್ವೀಟ್ ಮಾಡಿ, ಬನಾನಾ ರಿಪಬ್ಲಿಕ್‌ ಆಗುತ್ತಿರುವುದಕ್ಕೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಉನ್ನಾವೋ ಕೇಸ್, ಹೈದರಾಬಾದ್ ಭಯಾನಕ ಹಾಗೂ ಎನ್‍ಕೌಂಟರ್ ಎಂದು ಹ್ಯಾಷ್ ಟ್ಯಾಗ್ ಹಾಕಿಕೊಂಡಿದ್ದಾರೆ. ಅವರ ಟ್ವೀಟ್‍ಗೆ ಭಾರೀ ಟೀಕೆ ವ್ಯಕ್ತವಾಗಿದೆ.

Comments

Leave a Reply

Your email address will not be published. Required fields are marked *