ದರ ನಿಯಂತ್ರಣಕ್ಕೆ ಒತ್ತಾಯಿಸಿ ಹಗ್ಗಕ್ಕೆ ಈರುಳ್ಳಿ ಕಟ್ಟಿ ಪ್ರತಿಭಟನೆ

ಮಂಗಳೂರು: ದುಬಾರಿ ಆಗುತ್ತಿರುವ ಈರುಳ್ಳಿ ಬೆಲೆಯನ್ನು ನಿಯಂತ್ರಿಸಲು ಒತ್ತಾಯಿಸಿ ಹಳೆ ಬಂದರು ಶ್ರಮಿಕರ ಸಂಘದ ನೇತೃತ್ವದಲ್ಲಿ ಹಳೆ ಬಂದರು ಸಗಟು ಮಾರುಕಟ್ಟೆಯ ಹಮಾಲಿ ಕಾರ್ಮಿಕರು ನೇಣು ಹಗ್ಗಕ್ಕೆ ಈರುಳ್ಳಿ ಕಟ್ಟಿ ವಿನೂತನ ರೀತಿಯ ಪ್ರತಿಭಟನೆ ನಡೆಸಿದರು.

ಈರುಳ್ಳಿ ಬೆಲೆ ಏರಿಕೆಯಿಂದಾಗಿ ಮಾರುಕಟ್ಟೆಯ ಹಮಾಲಿ ಕಾರ್ಮಿಕರು ಕಳೆದ ಒಂದು ತಿಂಗಳಿನಿಂದ ದುಡಿಮೆ ಇಲ್ಲದೆ ಕಂಗಾಲಾಗಿದ್ದಾರೆ. ಪ್ರತಿನಿತ್ಯ 300ಟನ್ ಈರುಳ್ಳಿ ವಹಿವಾಟು ನಡೆಯುತ್ತಿದ್ದ ಮಂಗಳೂರು ಮಾರುಕಟ್ಟೆಯಲ್ಲಿ 10ಟನ್ ಈರುಳ್ಳಿ ಕೂಡ ವ್ಯಾಪಾರ ಆಗುತ್ತಿಲ್ಲ. ಇದು ಕಾರ್ಮಿಕರನ್ನು ಸಂಕಷ್ಟಕ್ಕೆ ತಳ್ಳಿದೆ ಹೀಗಾಗಿ ಸರ್ಕಾರ ಮಧ್ಯ ಪ್ರವೇಶಿಸಿ ಇದಕ್ಕೊಂದು ಪರಿಹಾರ ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಕೆ ಇಮ್ತಿಯಾಝ್ ಮಾತನಾಡುತ್ತ ದೇಶದಲ್ಲಿ ಮಾರುಕಟ್ಟೆ ಭಯೋತ್ಪಾದನೆ ಹೆಚ್ಚಾಗಿದೆ. ದಲ್ಲಾಳಿಗಳ ಲಾಭ ಕೋರತನದ ಕ್ರೌರ್ಯಕ್ಕೆ ದೇಶದ ಜನ ತತ್ತರಿಸಿ ಹೋಗುತ್ತಿದ್ದಾರೆ. ದೇಶವನ್ನು ಆಳುವ ಸರ್ಕಾರಕ್ಕೆ ಆಮದು ಮತ್ತು ರಫ್ತು ವಹಿವಾಟಿನ ಮೇಲೆ ನಿಯಂತ್ರಣ ಕಳೆದುಕೊಂಡಿರುವ ಪರಿಣಾಮವಾಗಿ ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಬರುತ್ತಿಲ್ಲ. ಇದನ್ನೂ ಓದಿ: ಕಡಲ ನಗರಿ ಮಂಗ್ಳೂರಿಗೆ ಬಂದಿಳಿಯಿತು ಟರ್ಕಿ ಈರುಳ್ಳಿ

ಮಂಗಳೂರು ಮಾರುಕಟ್ಟೆಯಲ್ಲಿ ಗಂಟೆಗೊಂದು ಬೆಲೆಗೆ ಈರುಳ್ಳಿ ಮಾರಾಟ ಆಗುತ್ತಿದೆ. ಟರ್ಕಿ ಮತ್ತು ಈಜಿಪ್ಟ್ ದೇಶಗಳಿಂದ ಆಮದು ಮಾಡಿಕೊಳ್ಳಲಾದ ಈರುಳ್ಳಿಯನ್ನು ದಲ್ಲಾಳಿಗಳು ಬೇಕಾಬಿಟ್ಟಿ ದರ ಏರಿಸಿ ಜನರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

Comments

Leave a Reply

Your email address will not be published. Required fields are marked *