ಪ್ರೀತಿಸಿ ಮದುವೆ- ಪತ್ನಿ ಗರ್ಭಿಣಿಯಾಗಿದ್ದಕ್ಕೆ ನಡುರಸ್ತೆಯಲ್ಲೇ ಕೊಂದ

ಚಿಕ್ಕಬಳ್ಳಾಪುರ: ಪತ್ನಿ ಗರ್ಭಿಣಿ ಎಂಬ ವಿಚಾರ ತಿಳಿದ ಗಂಡನೊಬ್ಬ ಆಕೆಯ ಶೀಲ ಶಂಕಿಸಿ ನಡುರಸ್ತೆಯಲ್ಲೇ ಕೊಲೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಜಿಲ್ಲೆಯ ಕಾಕಲಚಿಂತೆ ಗ್ರಾಮದ ಪವಿತ್ರ ಮೃತ ಪತ್ನಿ. ದೇವಸ್ಥಾನ ಹೊಸಹಳ್ಳಿ ಗ್ರಾಮದ ಆನಂದ್ ಗರ್ಭಿಣಿ ಪತ್ನಿಯನ್ನು ನಡುರಸ್ತೆಯಲ್ಲೇ ವೇಲ್‍ನಿಂದ ಕುತ್ತಿಗೆಗೆ ಸುತ್ತಿ ಕೊಲೆ ಮಾಡಿದ್ದಾನೆ.

ಏನಿದು ಪ್ರಕರಣ?
ಮೃತ ಪವಿತ್ರಾ ಚಿಕ್ಕಬಳ್ಳಾಪುರ ತಾಲಯ ಸೇಟ್ ದಿನ್ನೆ ಬಳಿ ಫ್ಯಾಕ್ಟರಿ ಕೆಲಸಕ್ಕೆ ಹೋಗುತ್ತಿದ್ದಳು. ಅದೇ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಆನಂದ್ ಕಳೆದ ಮೂರು ವರ್ಷಗಳ ಹಿಂದೆ ಪ್ರೀತಿಸಿ ಪೋಷಕರ ವಿರೋಧದ ನಡುವೆಯೂ ಅಂತರ್ಜಾತಿ ವಿವಾಹವಾಗಿದ್ದನು. ಇತ್ತೀಚೆಗೆ ಪವಿತ್ರ ಬೆಂಗಳೂರಿನಲ್ಲಿ ಬೇರೆ ಕೆಲಸಕ್ಕೆ ಸೇರಿ ರಾಮಮೂರ್ತಿ ನಗರದಲ್ಲಿ ವಾಸವಾಗಿದ್ದಳು. ಆದರೆ ಏನೂ ಕೆಲಸ ಮಾಡದ ಆನಂದ್ ಊರಲ್ಲೇ ಇದ್ದು, ಆಗಾಗ ರಾಮಮೂರ್ತಿ ನಗರಕ್ಕೆ ಹೋಗಿ ಬರುತ್ತಿದ್ದನು ಎಂದು ತಿಳಿದು ಬಂದಿದೆ.

ಸ್ವಲ್ಪ ದಿನದ ಹಿಂದೆ ಪವಿತ್ರ ಗರ್ಭಿಣಿ ಎಂಬ ವಿಷಯ ತಿಳಿದ ಆನಂದ್ ಆಕೆಯ ಶೀಲದ ಮೇಲೆ ಸಂಶಯಪಟ್ಟಿದ್ದಾನೆ. ನಂತರ ನಿಮ್ಮ ಮನೆಯವರು ವರದಕ್ಷಿಣೆ ಕೊಡಲಿಲ್ಲ ಎಂದು ಆಗಾಗ ಜಗಳ ಮಾಡುತ್ತಿದ್ದನು. ಕೊನೆಗೆ ಪತ್ನಿಯನ್ನು ಕೊಲೆ ಮಾಡಬೇಕು ಎಂದು ಮೊದಲೇ ಪ್ಲಾನ್ ಮಾಡಿಕೊಂಡಿದ್ದನು. ಅದರಂತೆಯೇ ಆನಂದ್ ಆಕೆಯನ್ನ ದೇವನಹಳ್ಳಿ-ದೊಡ್ಡಬಳ್ಳಾಪುರ ಮಾರ್ಗವಾಗಿ ಗೌರಿಬಿದನೂರಿಗೆ ಹೋಗೋಣ ಎಂದು ಕರೆದುಕೊಂಡು ಹೋಗಿದ್ದಾನೆ. ನಂತರ ನಡುರಸ್ತೆಯಲ್ಲೇ ವೇಲ್‍ನಿಂದ ಕುತ್ತಿಗೆಗೆ ಸುತ್ತಿ ಗರ್ಭಿಣಿ ಪತ್ನಿಯನ್ನು ಕೊಲೆ ಮಾಡಿದ್ದಾನೆ.

ತದನಂತರ ಆಕೆಯ ಮೃತದೇಹವನ್ನು ರಸ್ತೆಯಲ್ಲೇ ಬಿಟ್ಟು ಅಪಘಾತ ಎಂದು ಬಿಂಬಿಸಿದ್ದಾನೆ. ತಡರಾತ್ರಿ ಅಪರಿಚಿತ ಮಹಿಳೆಯ ಮೃತದೇಹ ಕಂಡು ಮಂಚೇನಹಳ್ಳಿ ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಆಗ ಪತಿ ಆನಂದ್‍ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ನಡೆದ ಅಸಲಿ ಸತ್ಯ ಬಯಲಾಗಿದೆ.

ಈ ಕುರಿತು ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *