ಬಳ್ಳಾರಿ ಬಿಜೆಪಿಯಲ್ಲಿ ಹೆಚ್ಚಾದ ಒಳಬೇಗುದಿ – ಆನಂದ್ ಸಿಂಗ್ ಏಕಾಂಗಿ?

ಬಳ್ಳಾರಿ: ಬಿಜೆಪಿಯಲ್ಲಿರುವ ಆಂತರಿಕ ಕಲಹಗಳು ಬಳ್ಳಾರಿಯ ವಿಜಯನಗರ ಉಪಚುನಾವಣಾ ಕಣದ ಮೇಲೆ ಭಾರೀ ಪರಿಣಾಮ ಬೀರಿದಂತೆ ಕಾಣಿಸುತ್ತಿದೆ. ಬಿಜೆಪಿಯ ಒಳಬೇಗುದಿಗೆ ವಿಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಬಳಲಿ ಬೆಂಡಾಗಿದ್ದಾರಾ ಎಂಬ ಮಾತುಗಳು ಕೇಳಿ ಬರುತ್ತಿವೆ.

ವಿಜಯನಗರದಲ್ಲಿ ಉಪಚುನಾವಣೆಗೆ ಇನ್ನೂ 5 ದಿನ ಬಾಕಿ ಇದೆ. ಹೀಗಿದ್ದರೂ ಬಳ್ಳಾರಿ ಬಿಜೆಪಿಯ ಪ್ರಭಾವಿ ಹಾಲಿ, ಮಾಜಿ ಶಾಸಕರ ಸುಳಿವಿಲ್ಲ. ಬಳ್ಳಾರಿ ಜಿಲ್ಲೆಯ ವಿಭಜನೆಗೆ ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿದ್ದ ರೆಡ್ಡಿ ಸಹೋದರ್ಯಾರು ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಜೊತೆ ಇಲ್ಲಿವರೆಗೂ ಕಾಣಿಸಿಕೊಂಡಿಲ್ಲ. ವಿಜಯನಗರ ಜಿಲ್ಲೆ ಮಾಡೋದಕ್ಕೆ ನಮ್ಮ ಪ್ರಬಲ ವಿರೋಧವಿದೆ. ಹೊಸಪೇಟೆ ಬದಲು ಹರಪನಹಳ್ಳಿ ಜಿಲ್ಲೆ ಮಾಡಿ ಎಂದು ಹೇಳಿದ್ದ ಶಾಸಕ ಕರುಣಾಕರ್ ರೆಡ್ಡಿ ಕೂಡ ಚುನಾವಣಾ ಪ್ರಚಾರಕ್ಕೆ ಬಂದಿಲ್ಲ.

ಕೂಡ್ಲಿಗಿ ಶಾಸಕ ಎನ್.ವೈ.ಗೋಪಾಲಕೃಷ್ಣ ಒಂದು ಬಾರಿ ಬಂದು ಹೋಗಿರೋದು ಬಿಟ್ಟರೆ, ಮತ್ತೆ ಯಾರು ಬಂದಿಲ್ಲ. ಸಿರಗುಪ್ಪ ಶಾಸಕ ಸೋಮಲಿಂಗಪ್ಪ ಚುನಾವಣಾ ಪ್ರಚಾರಕ್ಕೂ ನಮಗೂ ಸಂಬಂಧವೇ ಇಲ್ಲ ಎಂಬಂತಿದ್ದಾರೆ. ಇತ್ತ ಪಕ್ಕದ ಕ್ಷೇತ್ರವಾದ, ಕಂಪ್ಲಿಯ ಮಾಜಿ ಶಾಸಕ ಸುರೇಶ್ ಬಾಬು ಕೂಡ ಸುಳಿದಿಲ್ಲ. ಒಂದು ಕಡೆ ವಿಜಯನಗರ ಜಿಲ್ಲೆ ವಿಚಾರ, ಇನ್ನೊಂದು ಕಡೆ ಮೂಲ ಬಿಜೆಪಿಗರು, ಕಾಂಗ್ರೆಸ್ ಬಿಟ್ಟು ಬಂದ ಆನಂದ್ ಸಿಂಗ್‍ಗೆ ಸಹಾಯ ಮಾಡುವುದು ಯಾಕೆ ಎನ್ನುತ್ತಿದ್ದಾರೆ.

ಹೀಗಾಗಿ ಆನಂದ್ ಸಿಂಗ್ ಏಕಾಂಗಿಯಾಗಿ ವಿಜಯನಗರ ಕ್ಷೇತ್ರಾದ್ಯಂತ ಓಡಾಡುತ್ತಿದ್ದಾರೆ. ಮಗನ ಮದುವೆ, ಗೃಹಪ್ರವೇಶದ ಮಧ್ಯೆಯೂ ಎಲ್ಲವನ್ನೂ ಬ್ಯಾಲೆನ್ಸ್ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಕೂಡ ಭರ್ಜರಿ ಪ್ರಚಾರ ನಡೆಸುತ್ತಿದ್ದು, ಘಟಾನುಘಟಿ ನಾಯಕರು ಕ್ಷೇತ್ರದಲ್ಲಿ ಬೀಡು ಬಿಟ್ಟಿದ್ದಾರೆ.

Comments

Leave a Reply

Your email address will not be published. Required fields are marked *