ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಸ್ಫೋಟ- 6 ಸಿಬ್ಬಂದಿಯ ಸ್ಥಿತಿ ಗಂಭೀರ

ಬೆಂಗಳೂರು: ಮಡಿವಾಳದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯ (ಎಫ್‍ಎಸ್‍ಎಲ್)ದಲ್ಲಿ ಕೆಮಿಕಲ್ ಸ್ಫೋಟಗೊಂಡು 6 ಜನ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮಡಿವಾಳದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಅಂಥೋನಿ ಪ್ರಭು, ನವ್ಯ, ವಿಶ್ವನಾಥ್, ಶ್ರೀನಾಥ್, ವಿಶುವಲ್ಲಭ, ಬಸವ ಪ್ರಭು, ನೇತ್ರಾವತಿ ಘಟನೆಯಲ್ಲಿ ಗಾಯಗೊಂಡವರು. ಡಿಟೋನೇಟರ್ ಗಳನ್ನು ಪರೀಕ್ಷೆ ಮಾಡಲಾಗುತ್ತಿದ್ದಾಗ ಸ್ಫೋಟ ಸಂಭವಿಸಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ನಗರ ಪೊಲೀಸ್ ಆಯುಕ್ತ ಭಾಸ್ಕರ ರಾವ್ ಅವರು, ರಾಯಚೂರಿನಿಂದ ಬಂದಿದ್ದ 9 ಜೀವಂತ ಡಿಟೋನೇಟರ್ ಗಳ ಪರೀಕ್ಷೆ ನಡೆದಿತ್ತು. ಈ ಪೈಕಿ ಒಂದು ಡಿಟೋನೇಟರ್ ಸ್ಫೋಟಗೊಂಡ ಪರಿಣಾಮ ಪ್ರಯೋಗಾಲಯದಲ್ಲಿದ್ದ 6 ಜನ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಯೋಗಾಲಯದ ಮೇಲ್ವಿಚಾರಕರಾದ ವಾಣಿ ಅವರು ಕೆಲಸದ ನಿಮಿತ್ತ ಶಿವಮೊಗ್ಗಕ್ಕೆ ಹೋಗಿದ್ದರು. ಹೀಗಾಗಿ ಹಿರಿಯ ಇಂಜಿನೀಯರ್ ಶ್ರೀನಾಥ್ ನೇತೃತ್ವದಲ್ಲಿ ಡಿಟೋನೇಟರ್ ಪರಿಶೀಲನೆ ಮಾಡಲಾಗುತ್ತಿತ್ತು. ಈ ವೇಳೆ ಸ್ಫೋಟ ಸಂಭವಿಸಿ, ಸಿಬ್ಬಂದಿ ನವ್ಯ ಕಣ್ಣು ಹಾಗೂ ಕಿವಿಗೆ ಗಂಭೀರವಾಗಿ ಗಾಯವಾಗಿದೆ. ಶ್ರೀನಾಥ್ ಅವರ ಎರಡು ಬೆರಳು ತುಂಡಾಗಿವೆ ಎಂದು ಭಾಸ್ಕರ ರಾವ್ ತಿಳಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡಿರುವ ಶ್ರೀನಾಥ್ ಹಾಗೂ ನವ್ಯ ಅವರಿಗೆ ಸಿಟಿ ಸ್ಕ್ಯಾನ್ ಮಾಡಿಸಿ, ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದೆ. ನವ್ಯ ಕಳೆದ ಒಂದು ವರ್ಷದ ಹಿಂದಷ್ಟೇ ಕೆಲಸಕ್ಕೆ ಸೇರಿದ್ದರು. ಅವರು ಡಿಟೋನೇಟರ್ ಪರೀಕ್ಷೆ ವೇಳೆ ಪರಿಶೀಲನೆ ಮಾಡುವುದನ್ನು ನೋಡಿಕೊಳ್ಳುತ್ತಿದ್ದರು ಎಂದು ಹೇಳಿದರು.

Comments

Leave a Reply

Your email address will not be published. Required fields are marked *