ಸೆಕ್ಯೂಲರಿಸಂ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರ ನೀಡದೇ ನುಣುಚಿಕೊಂಡ ಮಹಾ ಸಿಎಂ

ಮುಂಬೈ: ಸೆಕ್ಯೂಲರಿಸಂ(ಜಾತ್ಯಾತೀತೆ)ಯ ಬಗ್ಗೆ ಕೇಳಲಾದ ಪ್ರಶ್ನೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸ್ಪಷ್ಟವಾದ ಉತ್ತರ ನೀಡದೇ ಸಂವಿಧಾನದ ಉದಾಹರಣೆ ನೀಡಿ ನುಣಿಚಿಕೊಂಡಿದ್ದಾರೆ.

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಉದ್ಧವ್ ಠಾಕ್ರೆ ಮೊದಲ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾಧ್ಯಮದವರು “ಸೆಕ್ಯುಲರ್ ಸಿದ್ದಾಂತವನ್ನು ಪ್ರತಿಪಾದಿಸುತ್ತಿರುವ ಕಾಂಗ್ರೆಸ್ ಮತ್ತು ಎನ್‍ಸಿಪಿ ಜೊತೆ ಶಿವಸೇನೆ ಮೈತ್ರಿ ಮಾಡಿಕೊಂಡಿದೆ. ಆ ಮೂಲಕ ಶಿವಸೇನೆ ಸೆಕ್ಯುಲರ್ ನಿಲುವನ್ನು ಒಪ್ಪಿಕೊಂಡಿದೆಯೇ” ಎಂದು ಪ್ರಶ್ನೆ ಮಾಡಿದರು.

ಈ ಪ್ರಶ್ನೆಗೆ,”ಸೆಕ್ಯೂಲರ್ ಅಂದರೆ ಏನು ಎಂಬುದನ್ನು ನೀವು ನನಗೆ ಮೊದಲು ತಿಳಿಸಿ. ಸೆಕ್ಯೂಲರ್ ಎಂದರೇನು ಎಂಬುದನ್ನು ಸಂವಿಧಾನದಲ್ಲಿ ಸ್ಪಷ್ಟವಾಗಿ ತಿಳಿಸಿದೆ” ಎಂದಷ್ಟೇ ಉತ್ತರ ನೀಡಿ ಉದ್ಧವ್ ಜಾರಿಕೊಂಡರು. ಇದನ್ನೂ ಓದಿ: ಮಹಾ ಸಿಎಂ ಆಗಿ ಉದ್ಧವ್ ಪ್ರಮಾಣವಚನ – ಶಿವಾಜಿ ಪಾರ್ಕಿನಲ್ಲೇ ಕಾರ್ಯಕ್ರಮ ನಡೆದಿದ್ದು ಯಾಕೆ?

ವಿಶೇಷ ಏನೆಂದರೆ ಸದ್ಯ ಬಿಜೆಪಿ ವಿರುದ್ಧ ಭಾರೀ ವಾಗ್ದಾಳಿ ನಡೆಸುತ್ತಿರುವ ಶಿವಸೇನೆಯ ರಾಜ್ಯಸಭಾ ಸದಸ್ಯ ಸಂಜಯ್ ರಾವತ್ 2015ರಲ್ಲಿ ಸಂವಿಧಾನದ ಪ್ರಸ್ತಾವನೆಯಲ್ಲಿರುವ ‘ಜಾತ್ಯಾತೀತ’ ಮತ್ತು ‘ಸಮಾಜವಾದಿ’ ಪದಗಳನ್ನು ಶಾಶ್ವತವಾಗಿ ತೆಗೆದುಹಾಕಬೇಕೆಂದು ಆಗ್ರಹಿಸಿದ್ದರು. ಸಂವಿಧಾನದಲ್ಲಿ ತಪ್ಪಾಗಿ ಈ ಪದಗಳನ್ನು ಸೇರಿಸಲಾಗಿದೆ. ನಮ್ಮದು ಜಾತ್ಯಾತೀತ ರಾಷ್ಟ್ರವಲ್ಲ. ಧರ್ಮದ ಆಧಾರದಲ್ಲಿ ನಮ್ಮ ದೇಶ ವಿಭಜನೆಯಾಗಿದೆ. ಮುಸ್ಲಿಮರಿಗಾಗಿ ಪಾಕಿಸ್ತಾನ ನಿರ್ಮಾಣಗೊಂಡರೆ ಹಿಂದೂಗಳಿಗಾಗಿ ಭಾರತ ನಿರ್ಮಾಣಗೊಂಡಿದೆ. ಹೀಗಾಗಿ ನಮ್ಮ ದೇಶ ಹಿಂದೂರಾಷ್ಟ್ರವಾಗಿರಬೇಕು ಹೊರತು ಜಾತ್ಯಾತೀತ ರಾಷ್ಟ್ರವಲ್ಲ. ಶಿವಸೇನೆಯ ಸಂಸ್ಥಾಪಕರಾದ ಬಾಳಾ ಠಾಕ್ರೆ ಮತ್ತು ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರು ಈ ವಿಚಾರವನ್ನು ಈ ಹಿಂದೆಯೇ ಹೇಳಿಕೊಂಡಿದ್ದರು ಎಂದು ತಿಳಿಸಿದ್ದರು.

 

ಮರಾಠ ಅಸ್ಮಿತೆ ಮತ್ತು ಹಿಂದೂ ವಿಚಾರಗಳನ್ನೇ ಇಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದ ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿತ್ತು. ಬಿಜೆಪಿಗೆ ಗುಡ್‍ಬೈ ಹೇಳಿ ಸರ್ಕಾರ ರಚಿಸಲು ಮುಂದಾಗಿದ್ದಕ್ಕೆ ಕಮಲ ನಾಯಕರು ಶಿವಸೇನೆ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಶಿವಸೇನಾದ ಹಿಂದುತ್ವವು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಮುಂದೆ ತಲೆ ಬಾಗಿದೆ. ವಿರೋಧಿ ಸಿದ್ಧಾಂತ ಹೊಂದಿರುವ ಮೈತ್ರಿ ಸರ್ಕಾರ ಶೀಘ್ರವೇ ಪತನವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಭವಿಷ್ಯ ನುಡಿದಿದ್ದಾರೆ. ರಾಮಮಂದಿರ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್, ಎನ್‍ಸಿಪಿ ಜೊತೆ ಸರ್ಕಾರ ರಚಿಸಿ ಶಿವಸೇನೆ ಮಹಾರಾಷ್ಟ್ರದ ಜನಾದೇಶವನ್ನು ಧಿಕ್ಕರಿಸಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಕಿಡಿಕಾರಿದ್ದರು.

Comments

Leave a Reply

Your email address will not be published. Required fields are marked *