ಹೊಸನಗರದಲ್ಲಿ ಹಳ್ಳಕ್ಕೆ ಬಿದ್ದ ಕಾರು – ಪತ್ನಿ ವಿರುದ್ಧವೇ ದೂರು ನೀಡಿದ ಪತಿ

ಶಿವಮೊಗ್ಗ: ಜಿಲ್ಲೆಯ ಹೊಸನಗರದಲ್ಲಿ ಕಾರನ್ನು ಅಡ್ಡಾದಿಡ್ಡಿ ಚಾಲನೆ ಮಾಡಿ ಹಳ್ಳಕ್ಕೆ ಉರುಳಿಸಿದ ಪತ್ನಿಯ ವಿರುದ್ಧವೇ ಪತಿ ದೂರು ದಾಖಲಿಸಿದ್ದಾರೆ.

ಉಡುಪಿಯ ನಿವಾಸಿ ನಾಗರಾಜ್ ಅವರು ಪತ್ನಿ ಮಂಜುಳ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಪತ್ನಿ ಅಜಾಗರೂಕತೆಯಿಂದ ಕಾರು ಚಲಾಯಿಸಿದ ಪರಿಣಾಮ ವಾಹನ ಹಳ್ಳಕ್ಕೆ ಬಿದ್ದು ನನ್ನ ಮಗ, ಮಗಳು ಹಾಗೂ ಅತ್ತಿಗೆಗೆ ಗಾಯಗಳಾಗಿವೆ. ಆದ್ದರಿಂದ ಪತ್ನಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನಾಗರಾಜ್ ದೂರು ನೀಡಿ ಒತ್ತಾಯಿಸಿದ್ದಾರೆ.

ಮಂಗಳವಾರ ಬೆಳಿಗ್ಗೆ ನಾನು ನನ್ನ ಭಾವ ಪ್ರಭಾಕರ ಮೆಸ್ತಾರವರ ಬ್ರೀಜಾ ಕಾರಿನಲ್ಲಿ ಪತ್ನಿ, ಮಗ ಈಶಾನ್(8), ಪತ್ನಿ ಅಕ್ಕ ಸುಮನಾ ಹಾಗೂ ಅವರ ಮಗಳು ಸುಪ್ರಭಾ(12) ಜೊತೆ ಸಾಗರದಲ್ಲಿರುವ ಸಂಬಂಧಿ ಮನೆಗೆ ತೆರಳುತ್ತಿದ್ದೆವು. ಕುಂದಾಪುರ, ಸಿದ್ದಾಪುರ, ಹೊಸಂಗಡಿ, ನಗರ ಮೂಲಕ ಕಾರಿನಲ್ಲಿ ಪ್ರಯಾಣಿಸುತ್ತಿದ್ದೆವು. ಈ ವೇಳೆ ಪತ್ನಿ ಕಾರು ಚಲಾಯಿಸುತ್ತಿದ್ದಳು. ಆದರೆ ಆಕೆ ಅಜಾಗರೂಕತೆಯಿಂದ ಕಾರು ಚಲಾಯಿಸಿದ ಪರಿಣಾಮ ಹೊಸನಗರದ ರಾಮಚಂದ್ರಪುರ ಗ್ರಾಮದ ಶರಾವತಿ ಸೇತುವೆಯ ಬಳಿ ಕಾರು ಹಳ್ಳಕ್ಕೆ ಬಿದ್ದು ಅಪಘಾತಕ್ಕಿಡಾಗಿದೆ.

ಕಾರು ಚಾಲಾಯಿಸುವಾಗ ರಸ್ತೆಯ ಎಡಬದಿ ಬಿಟ್ಟು ವಾಹನವನ್ನು ಬಲಬದಿಗೆ ತೆಗೆದುಕೊಂಡು ಹೋದಾಗ, ಕಾರು ಕಚ್ಚಾ ರಸ್ತೆಗೆ ಇಳಿದು ನಿಯಂತ್ರಣ ತಪ್ಪಿ ಅಲ್ಲೇ ಪಕ್ಕದಲ್ಲಿ ನೀರು ತುಂಬಿದ್ದ ಹಳ್ಳಕ್ಕೆ ಪಲ್ಟಿಯಾಗಿದೆ. ತಕ್ಷಣ ನಾನು ಕಾರಿನಿಂದ ಇಳಿದು ಕಾರಿನಲ್ಲಿದ್ದ ಕುಟುಂಬಸ್ಥರನ್ನು ಹೊರ ಕರೆದುಕೊಂಡು ಬಂದೆ. ಕಾರು ಅಪಘಾತಕ್ಕೀಡಾದ ಪರಿಣಾಮ ಮಗನ ತಲೆಗೆ ಪೆಟ್ಟಾಗಿದೆ, ಅತ್ತಿಗೆಗೆ ಬೆನ್ನು, ಸೊಂಟಕ್ಕೆ ಪೆಟ್ಟಾಗಿದೆ, ಸುಪ್ರಭಾಳ ತುಟಿ ಹಾಗೂ ಹಲ್ಲಿಗೆ ಗಾಯವಾಗಿ ರಸ್ತಸ್ರಾವವಾಗಿದೆ. ಆದರೆ ಪತ್ನಿಗೆ ಯಾವುದೇ ಪೆಟ್ಟಾಗಿಲ್ಲ. ತಕ್ಷಣ ಗಾಯಗೊಂಡವರನ್ನು ನಾನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದೇನೆ.

ಪತ್ನಿಯ ಅಜಾಗರೂಕತೆ, ನಿರ್ಲಕ್ಷ್ಯದಿಂದಲೇ ಕುಟುಂಬದ ಸದಸ್ಯರು ಗಾಯಗೊಂಡಿದ್ದಾರೆ. ಹೀಗಾಗಿ ಆಕೆಯ ವಿರುದ್ಧ ಸೂಕ್ತ ಕ್ರಮ ಜರುಗಿಸಿ ಎಂದು ಹೊಸನಗರ ಠಾಣೆಯಲ್ಲಿ ನಾಗರಾಜ್ ದೂರು ನೀಡಿದ್ದು, ಪೊಲೀಸರು ಈ ಸಂಬಂಧ ಎಫ್‍ಐಆರ್ ದಾಖಲಿಸಿದ್ದಾರೆ.

Comments

Leave a Reply

Your email address will not be published. Required fields are marked *