ಹೊಸಕೋಟೆ ಮಿನಿ ಬಿಹಾರ ಆಗಿತ್ತು ಎಂದಿದ್ದು ನಿಜ: ವಿವಾದಾತ್ಮಕ ಹೇಳಿಕೆಗೆ ಎಂಟಿಬಿ ಸ್ಪಷ್ಟನೆ

– 120 ಕೋಟಿ ರೂ. ಕೊಡೋಕೆ ದುಡ್ಡು ಎಲ್ಲಿದೆ?
– ಶರತ್ ಬಚ್ಚೇಗೌಡ ಆರೋಪ ಸುಳ್ಳೆಂದ ಎಂಟಿಬಿ

ಬೆಂಗಳೂರು: ಸಂಸದ ಬಚ್ಚೇಗೌಡ ಹಾಗೂ ಮಾಜಿ ಶಾಸಕ ಚಿಕ್ಕೇಗೌಡ ಅವರ ಅವಧಿಯಲ್ಲಿ ಹೊಸಕೋಟೆ ಮಿನಿ ಬಿಹಾರ ಆಗಿತ್ತು ಅಂತ ನಾನು ಹೇಳಿದ್ದು ನಿಜ ಎಂದು ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಸ್ಪಷ್ಟನೆ ನೀಡಿದ್ದಾರೆ.

ಹೊಸಕೋಟೆಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಈ ಹಿಂದಿನ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಮಿನಿ ಬಿಹಾರ್ ಪರಿಸ್ಥಿತಿ ಇತ್ತು. ಬೇಕೆಂದರೆ ಈ ಬಗ್ಗೆ ಹೊಸಕೋಟೆ ಕ್ಷೇತ್ರದ ಹಿರಿಯ ಮತದಾರರನ್ನು ವಿಚಾರಿಸಿ ನಿಮಗೆ ಗೊತ್ತಾಗುತ್ತದೆ. ಸ್ವಾತಂತ್ರ್ಯ ನಂತರ ನಡೆದ 2003ರ ಚುನಾವಣೆಯವರೆಗೂ ಮಿನಿ ಬಿಹಾರ್ ಪರಿಸ್ಥಿತಿ ಇತ್ತು ಎಂದು ಹೇಳಿದರು.

ಹೊಸಕೋಟೆ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಅವರಿಗೆ ಯಾವುದೇ ಆಫರ್ ಕೊಟ್ಟಿಲ್ಲ. ನಾನು 120 ಕೋಟಿ ರೂ. ಕೊಡುತ್ತೇನೆ ಅಂತ ಎಲ್ಲಿಯಾದರೂ ಹೇಳಿಕೆ ನೀಡಿದ್ದೇನಾ? ಇಲ್ಲ ಅಲ್ವಾ. ನಾನು ವ್ಯಾಪಾರ ಮಾಡುತ್ತಿಲ್ಲ. ಮತದಾರರು ತಮ್ಮ ನಾಯಕರನ್ನು ಆಯ್ಕೆ ಮಾಡುತ್ತಾರೆ. ಹೀಗಿರುವಾಗ ನಾನು ಯಾಕೆ ಹಣ ಕೊಡಬೇಕು? ಅಷ್ಟೇ ಅಲ್ಲದೆ 120 ಕೋಟಿ ರೂ. ಕೊಡುವುದಕ್ಕೆ ನಮ್ಮ ಬಳಿ ಹಣವೇ ಇಲ್ಲ ಎಂದು ಸ್ಪಷ್ಟನೆ ನೀಡಿದರು.

ಕಾಂಗ್ರೆಸ್ ಅಭ್ಯರ್ಥಿ ಪರ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಚಾರ ಮಾಡುವುದರಿಂದ ಕುರುಬ ಸಮುದಾಯದ ಮತ ನಮ್ಮ ಕೈತಪ್ಪುವುದಿಲ್ಲ. ಹೊಸಕೋಟೆ ಕ್ಷೇತ್ರದ ಕುರುಬ ಸಮುದಾಯ ಅಷ್ಟೇ ಅಲ್ಲದೆ ಎಲ್ಲರೂ ನನಗೆ ಮತ ಹಾಕುತ್ತಾರೆ ಎನ್ನುವ ವಿಶ್ವಾಸವಿದೆ. ಉಪ ಚುನಾವಣೆಯಲ್ಲಿ ಮತದಾರರು ನನ್ನನ್ನು ಗೆಲ್ಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Comments

Leave a Reply

Your email address will not be published. Required fields are marked *