ಧ್ರುವ ಸರ್ಜಾ ಪೊಗರಿಗೆ ರಶ್ಮಿಕಾ ಮಂದಣ್ಣ ಪೈಪೋಟಿ!

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರ ತೆರೆಗಾಣುವ ದಿನಾಂಕ ನಿಗದಿಯಾಗುತ್ತಲೇ ಅಭಿಮಾನಿಗಳೆಲ್ಲ ಖುಷಿಗೊಂಡಿದ್ದಾರೆ. ಸಂಕ್ರಾಂತಿ ಹಬ್ಬಕ್ಕಾಗಿ ಇದೀಗ ಎಲ್ಲರೂ ಎದುರು ನೋಡಲಾರಂಭಿಸಿದ್ದಾರೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿರೋದು ಗೊತ್ತೇ ಇದೆ. ವಿಶೇಷವೆಂದರೆ, ರಶ್ಮಿಕಾ ಮಂದಣ್ಣ ಅಭಿನಯದ ಮತ್ತೊಂದು ಚಿತ್ರ ಧ್ರುವ ಸರ್ಜಾ ಪೊಗರಿಗೆ ಪೈಪೋಟಿ ನೀಡಲಿದೆ. ಅವರು ನಾಯಕಿಯಾಗಿ ನಟಿಸಿರುವ ತೆಲುಗಿನ ಸರಿಲೇರು ನೀಕೆವ್ವರು ಚಿತ್ರ ಕೂಡಾ ಸಂಕ್ರಾಂತಿಗೇ ತೆರೆಗಾಣುತ್ತಿದೆ. ಈ ಮೂಲಕ ರಶ್ಮಿಕಾ ನಾಯಕಿಯಾಗಿರೋ ಚಿತ್ರಗಳೇ ಒಂದಕ್ಕೊಂದು ಪೈಪೋಟಿ ನೀಡುವಂಥಾ ಅಪರೂಪದ ವಿದ್ಯಮಾನಕ್ಕೂ ಈ ಸಂಕ್ರಾಂತಿ ಸಾಕ್ಷಿಯಾಗಲಿದೆ.

ಈ ಮೂಲಕ ಈ ಸಂಕ್ರಾಂತಿಗೆ ದಕ್ಷಿಣ ಭಾರತೀಯ ಚಿತ್ರರಂಗ ರೋಚಕ ಸೆಣಸಾಟಕ್ಕೆ ಸಾಕ್ಷಿಯಾಗಲಿದೆ. ಪೊಗರು ಕೂಡಾ ಪ್ಯಾನಿಂಡಿಯಾ ಸಿನಿಮಾ. ಈಗಾಗಲೇ ಟೀಸರ್, ಟ್ರೇಲರ್‌ಗಳ ಮೂಲಕ ದೇಶಾದ್ಯಂತ ಸದ್ದು ಮಾಡುತ್ತಿದೆ. ಅತ್ತ ಮಹೇಶ್ ಬಾಬು ಅಭಿನಯದ ಸರಿಲೇರು ನೀಕೆವ್ವರು ಸಿನಿಮಾ ಕೂಡಾ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದ್ದ ಟೀಸರ್ ಮೂಲಕ ಭಾರೀ ಸದ್ದು ಮಾಡುತ್ತಿದೆ. ಮಹೇಶ್ ಬಾಬು ಚಿತ್ರಗಳೆಂದ ಮೇಲೆ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಇಂಥಾ ಸಂಚಲನ ಸೃಷ್ಟಿಸೋದೇನೂ ಹೊಸ ಬೆಳವಣಿಗೆಯಲ್ಲ. ಆದರೆ ಧ್ರುವ ಸರ್ಜಾರ ಪೊಗರು ಚಿತ್ರದ ಖದರ್ ಕೂಡಾ ಮಹೇಶ್ ಬಾಬು ಚಿತ್ರವನ್ನೇ ಸರಿಗಟ್ಟುವಂತಿದೆ.

ಇದೆಲ್ಲವೂ ಸಂಕ್ರಾಂತಿಯಂದು ಸರಿಲೇರು ನೀಕೆವ್ವರು ಮತ್ತು ಪೊಗರು ನಡುವೆ ಬಿಗ್ ಫೈಟ್ ನಡೆಯೋದರ ಮುನ್ಸೂಚನೆಯಂತೆಯೇ ಕಾಣಿಸುತ್ತಿದೆ. ಈ ಎರಡೂ ಚಿತ್ರಗಳಲ್ಲಿಯೂ ನಾಯಕಿಯಾಗಿ ನಟಿಸಿರುವ ರಶ್ಮಿಕಾ ಮಂದಣ್ಣ ಕೂಡಾ ಈ ಸನ್ನಿವೇಶದಿಂದ ಥ್ರಿಲ್ ಆದಂತಿದೆ. ಇದೇನು ಕದನವಲ್ಲ. ಆರೋಗ್ಯವಂತ ಪೈಪೋಟಿ. ಮಜವಾದ ಸಂಗತಿಯೆಂದರೆ, ಇದರಲ್ಲಿ ಎರಡೂ ಚಿತ್ರಗಳು ಜಯ ಸಾಧಿಸಿದರೆ ಅದು ರಶ್ಮಿಕಾರ ಪಾಲಿಗೆ ಡಬಲ್ ಧಮಾಕಾ. ಈವರೆಗೆ ನಟಿಸಿರೋ ಚಿತ್ರಗಳಲ್ಲೆಲ್ಲ ಗೆಲುವು ಕಾಣುತ್ತಾ ಮುಂದುವರೆಯುತ್ತಿರೋ ರಶ್ಮಿಕಾ ಸದ್ಯ ಸಂಕ್ರಾಂತಿಯ ಸುಸಂದರ್ಭದಲ್ಲಿ ಡಬಲ್ ಖುಷಿ ಕೈ ಹಿಡಿಯುವ ಭರವಸೆಯಿಂದಿದ್ದಾರೆ.

Comments

Leave a Reply

Your email address will not be published. Required fields are marked *