ಆನಂದ್ ಸಿಂಗ್ ರಾಜೀನಾಮೆ ನೀಡಲು ಮೋದಿ, ಶಾ ಕಾರಣ: ಹೆಚ್‍ಡಿಕೆ

ಬಳ್ಳಾರಿ: ಅನರ್ಹ ಶಾಸಕ ಆನಂದ್ ಸಿಂಗ್ ರಾಜೀನಾಮೆ ನೀಡಲು ಪ್ರಧಾನಿ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಶಾ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

ಇಂದು ನಾಯಕನಹಳ್ಳಿಯಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಮೋದಿ ಈ ದೇಶವನ್ನು ಹಾಳು ಮಾಡುತ್ತಾರೆ. ಗಣಿ ಮಣ್ಣು ಮಾರಿ ಆನಂದ್ ಸಿಂಗ್ ಸಿಕ್ಕಿಬಿದ್ದರು. ಆಗ ಮೇಲಿರುವ ಮೋದಿ ಮತ್ತು ಅಮಿತ್ ಶಾ ರಾಜೀನಾಮೆ ಕೊಡು ಇಲ್ಲಾ ಬಿಡಲ್ಲಾ ಎಂದು ಆನಂದ್ ಸಿಂಗ್‍ಗೆ ಹೇಳಿದ್ದಾರೆ. ಹೀಗಾಗಿ ಆನಂದ್ ಸಿಂಗ್ ರಾಜೀನಾಮೆ ಕೊಟ್ಟು ಸರ್ಕಾರ ಕೆಡವಿದರು ಎಂದು ಕಿಡಿಕಾರಿದರು.

ಸ್ವಾತಂತ್ರ್ಯ ಬಂದು 70 ವರ್ಷ ಆಗಿದ್ದು, ನಾವು ರಾಜಕಾರಣಿಗಳು ನಿಮಗೆ ಆಶ್ವಾಸನೆ ಕೊಡುತ್ತಲೇ ಬಂದಿದ್ದೇವೆ. ಆದರೆ ನಿಮ್ಮ ಬದುಕನ್ನು ಹಸನಾಗಿಸಿಲ್ಲ. ನಾ ಜನರ ಮದ್ಯೆ ಬದುಕಿದವನು. ನಮ್ಮನ್ನು ನೋಡಿದರೆ ನೀವು ಚಪ್ಪಲಿ ಬಿಟ್ಟು ನಮಸ್ಕಾರ ಮಾಡ್ತೀರಾ. ನಿಮ್ಮ ಬದುಕು ಯಾರು ಹಸನಾಗಿ ಮಾಡಿಲ್ಲಾ. ಗಣಿದೂಳಿನಲ್ಲಿ ಅನೇಕ ನಾಯಕರು ಬೆಳೆದಿದ್ದಾರೆ. ರೆಡ್ಡಿ ರಾಮುಲುಗಿಂತಾ ನಾ ಕಡಿಮೆ ಇಲ್ಲಾ ಎಂಬಂತೆ ಆನಂದ್ ಸಿಂಗ್ ಮನೆ ಕಟ್ಟಿಸಿದರು. ಆನಂದ್ ಸಿಂಗ್ ಗೆ ಆ ದುಡ್ಡು ಎಲ್ಲಿಂದ ಬಂತು. ನೀವು ಜೋಳ, ರಾಗಿ ಬಿತ್ತೋಕು ಜಮೀನು ಕೇಳಿದರೆ ನೀಮಗೆ ಲಾಟಿ ಏಟು ಕೊಡ್ತಿವಿ. ಆದರೆ ಅದೇ ಜಮೀನನ್ನು ಶ್ರೀಮಂತರ ಕಂಪನಿಗೆ ಕೊಡುತ್ತಾರೆ ಇದು ನಮ್ಮ ರಾಜಕೀಯ ವ್ಯವಸ್ಥೆ ಎಂದು ಅಸಮಾಧಾನ ಹೊರ ಹಾಕಿದರು.

ಆನಂದ್ ಸಿಂಗ್ ಬಿಜೆಪಿಯಿಂದ ರಾಜಕಾರಣಕ್ಕೆ ಬಂದರು. 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಏಕೆ ಸ್ಪರ್ಧೆ ಮಾಡಿದರು. ಕಾಂಗ್ರೆಸ್ ನಿಂದ ಗೆದ್ದ ಮೊದಲ ದಿನವೇ ಕಾಂಗ್ರೆಸ್ ಗೆ ಟೋಪಿ ಹಾಕಲು ತೀರ್ಮಾನ ಮಾಡಿದರು. ಈಗ ವಿಜಯನಗರ ಕ್ಷೇತ್ರದ ಅಭಿವೃದ್ಧಿ ನೆಪ ಹೇಳುತ್ತಿದ್ದಾರೆ. ಬಿಜೆಪಿ ಬಿಟ್ಟು ಕಾಂಗ್ರೆಸ್ ಗೆ ಬರುವಾಗ ನಿಮಗೆ ಅಭಿವೃದ್ಧಿ ಕಾಣಲಿಲ್ಲವೆ. ಅನರ್ಹ ಶಾಸಕರಿಗಾಗಿ ಪ್ರಾಣ ಕೊಡುತ್ತೇನೆ ಎಂದು ಸಿಎಂ ಬಿಎಸ್‍ವೈ ಹೇಳಿದ್ದಾರೆ. ಆದರೆ ಯಡಿಯೂರಪ್ಪ ಈ ರಾಜ್ಯದ ಜನರಿಗಾಗಿ ಪ್ರಾಣ ಕೊಡುತ್ತೇನೆ ಅಂತಾ ಹೇಳಲಿಲ್ಲ ಎಂದರು.

ನಾನು ಈ ಹಿಂದಿನ ಚುನಾವಣೆಯಲ್ಲಿ ನನಗೆ ಬಹುಮತ ಬಂದರೆ ಸಾಲಮನ್ನಾ ಮಾಡುತ್ತೇನೆ ಎಂದು ಹೇಳಿದ್ದೆ. ನಾ ಕೊಟ್ಟ ಮಾತು ಉಳಿಸಿಕೊಂಡೆ. ಕೇವಲ ರೈತರ ಸಾಲ ಮನ್ನಾ ಮಾಡಲು ನಾನು ಸಿಎಂ ಆಗಿದ್ದೇನೆ. ರೈತರ ಸಾಲ ಮನ್ನಾ ಮಾಡಿದ್ದು ನೀವು ಒಬ್ಬರೆ ಅಂತಾ ಹೇಳ್ತಿರಿ. ಆದರೆ ನನಗೆ ನೀವು ವೋಟ್ ಯಾಕೆ ಹಾಕಲ್ಲ. ನಮ್ಮ ಮಾತು ಕೇಳ್ತಿರಿ, ನೀನೂ ಒಳ್ಳೆಯ ರಾಜಕಾರಣಿ ಅಂತಾ ಹೇಳ್ತಿರಿ ಆದ್ರೆ ನಮಗೆ ಯಾಕ್ ವೋಟ್ ಹಾಕಲ್ಲಾ ನೀವು. ದುಡ್ಡು ಕೊಟ್ಟರೆ ನಮ್ಮನ್ನು ಮರೆತು ಬಿಡುತ್ತಿರಾ ಎಂದು ಮತದಾರನ್ನು ಪ್ರಶ್ನೆ ಮಾಡಿದರು.

Comments

Leave a Reply

Your email address will not be published. Required fields are marked *