– ತಾನು ರಚಿಸಿದ ವ್ಯೂಹದಲ್ಲಿ ಬಿಜೆಪಿ ಸಿಲುಕಿದೆ
– ಆ್ಯಕ್ಸಿಡೆಂಟಲ್ ಪ್ರಮಾಣ ವಚನ, ಐಸಿಯುನಲ್ಲಿ ಬಿಜೆಪಿ
ಮುಂಬೈ: ಮಹಾರಾಷ್ಟ್ರದಿಂದಲೇ ಬಿಜೆಪಿಯ ಅಂತ್ಯದ ದಿನಗಳು ಆರಂಭಗೊಂಡಿವೆ ಎಂದು ಶಿವಸೇನೆಯ ನಾಯಕ, ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಜನತೆ ಮಲಗಿದ್ದಾಗ ದೇವೇಂದ್ರ ಫಡ್ನವೀಸ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದೊಂದು ಆ್ಯಕ್ಸಿಡೆಂಟಲ್ ಪ್ರಮಾಣ ವಚನ ಕಾರ್ಯಕ್ರಮವಾಗಿದ್ದು, ಸದ್ಯ ಬಿಜೆಪಿ ಐಸಿಯು ನಲ್ಲಿದೆ. ನನ್ನಿಂದಾಗಿಯೇ ಬಿಜೆಪಿ ಮತ್ತು ಶಿವಸೇನೆಯ ಮೈತ್ರಿ ಮುರಿದಿದೆ ಎಂಬ ಬಿಜೆಪಿಯ ಆರೋಪ ಸುಳ್ಳು. ನಾವು ಸರ್ಕಾರ ರಚಿಸಲು ಹೊರಟ ಮಾರ್ಗ ಮಧ್ಯೆ ಫಡ್ನವೀಸ್ ನಮ್ಮ ಜೇಬು ಕಳ್ಳತನ ಮಾಡಿದರು. ನೀವು ಎಷ್ಟೇ ನಮಗೆ ಕಿರುಕುಳ ನೀಡಿದರೂ ನಾವು ಹಿಂದೆ ಸರಿಯಲ್ಲ. ಬಿಜೆಪಿ ಅಂತ್ಯವಾಗಲಿ ಎಂಬುವುದು ನಮ್ಮ ಶಾಪ ಎಂದು ಸಂಜಯ್ ರಾವತ್ ಕಿಡಿಕಾರಿದ್ದಾರೆ.

ನಮ್ಮ ಸರ್ಕಾರ ರಚನೆಗೆ ಅಡ್ಡಿಯುಂಟು ಮಾಡಲಾಗುತ್ತಿದೆ. ಬಿಜೆಪಿ ಮತ್ತು ಅಜಿತ್ ಪವಾರ್ ತಪ್ಪು ಹೆಜ್ಜೆಯನ್ನು ಇರಿಸಿದ್ದು, ನಮ್ಮ ಬಳಿ 165 ಶಾಸಕರಿದ್ದಾರೆ. ಪದಗ್ರಹಣ ಸಮಯದಲ್ಲಿ ಫಡ್ನವೀಸ್ ಮತ್ತು ಅಜಿತ್ ಪವಾರ್ ನೀಡಿರುವ ಶಾಸಕರ ಬೆಂಬಲ ಪತ್ರವನ್ನು ರಾಜ್ಯಪಾಲರು ಸ್ವೀಕರಿಸಿದ್ದಾರೆ. ಸಿಬಿಐ, ಇಡಿ, ಆದಾಯ ತೆರಿಗೆ ಮತ್ತು ಪೊಲೀಸರು ಬಿಜೆಪಿಯ ಕಾರ್ಯಕರ್ತರಾಗಿದ್ದಾರೆ. ಸದ್ಯದ ರಾಜ್ಯಪಾಲ ಭಗತ್‍ಸಿಂಗ್ ಕೋಶಿಯಾರಿ ಸಹ ಬಿಜೆಪಿ ಕಾರ್ಯಕರ್ತರಾಗಿದ್ದಾರೆ. ಆದರೆ ಬಿಜೆಪಿ ತಾನು ರಚಿಸಿದ ವ್ಯೂಹದಲ್ಲಿ ಸಿಲುಕಿಕೊಂಡಿದೆ. ಇದು ಬಿಜೆಪಿಯ ಅಂತ್ಯದ ಮುನ್ಸೂಚನೆ ಎಂದು ಸಂಜತ್ ರಾವತ್ ಭವಿಷ್ಯ ನುಡಿದರು.
ಸುಪ್ರೀಂ ನೋಟಿಸ್: ಬಹುಮತ ಇಲ್ಲದಿದ್ದರೂ ಫಡ್ನಾವಿಸ್ ಸರ್ಕಾರ ರಚನೆಗೆ ಅವಕಾಶ ಕೊಟ್ಟ ರಾಜ್ಯಪಾಲರ ವಿರುದ್ಧ ಶಿವಸೇನೆ, ಕಾಂಗ್ರೆಸ್, ಎನ್‍ಸಿಪಿ ಪ್ರತ್ಯೇಕವಾಗಿ ಸುಪ್ರೀಂಕೋರ್ಟ್‍ನಲ್ಲಿ ಸಲ್ಲಿಸಿದ್ದ ತುರ್ತು ಅರ್ಜಿಯ ವಿಚಾರಣೆ ಇಂದು ನ್ಯಾ.ಎನ್‍ವಿ ರಮಣ, ಅಶೋಕ್ ಭೂಷಣ್, ಸಂಜೀವ್ ಖನ್ನಾ ಅವರಿದ್ದ ತ್ರಿಸದಸ್ಯ ಪೀಠದಲ್ಲಿ ವಿಚಾರಣೆ ನಡೆಯಿತು. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮಹಾರಾಷ್ಟ್ರ ಸರ್ಕಾರ ರಚನೆಗೆ ಸಂಬಂಧಿಸಿದಂತೆ ಎರಡು ಮುಖ್ಯ ದಾಖಲೆಗಳನ್ನು ಸೋಮವಾರ ಬೆಳಗ್ಗಿನ ವಿಚಾರಣೆಯಲ್ಲಿ ಹಾಜರುಪಡಿಸುವಂತೆ ಸಾಲಿಸೀಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ.

ವಿಚಾರಣೆ ನಡೆಸಿದ ಪೀಠ ರಾಜ್ಯಪಾಲರು ಬಿಜೆಪಿಯನ್ನು ಸರ್ಕಾರ ರಚನೆ ಮಾಡುವಂತೆ ಆಹ್ವಾನಿಸಿದ ಪತ್ರ ಮತ್ತು ಸರ್ಕಾರ ರಚನೆ ಮಾಡಲು ದೇವೇಂದ್ರ ಫಡ್ನವೀಸ್ ಅವರಿಗೆ ಇರುವ ಅಗತ್ಯ ಸಂಖ್ಯೆಯ ಶಾಸಕರ ಸಹಿಯುಳ್ಳ ಪತ್ರವನ್ನು ಪೀಠದ ಮುಂದೆ ಹಾಜರುಪಡಿಸುವಂತೆ ಪೀಠ ತುಷಾರ್ ಮೆಹ್ತಾ ಅವರಿಗೆ ಸೂಚಿಸಿತು.
ಶಿವಸೇನೆ, ಕಾಂಗ್ರೆಸ್, ಎನ್‍ಸಿಪಿ ಪರವಾಗಿ ವಾದ ಮಂಡಿಸಿದ ಕಪಿಲ್ ಸಿಬಲ್, ಕಳೆದ ವರ್ಷ ಯಡಿಯೂರಪ್ಪ ಅವರಿಗೆ ಸುಪ್ರೀಂ ಕೋರ್ಟ್ ಒಂದು ದಿನದ ಒಳಗಡೆ ಬಹುಮತ ಸಾಬೀತು ಪಡಿಸುವಂತೆ ಸೂಚಿಸಿದ್ದನ್ನು ಉಲ್ಲೇಖಿಸಿ, ರಾಜ್ಯಪಾಲರ ನಿರ್ಧಾರ ಸರಿಯಲ್ಲ. ಯಾವ ದಾಖಲೆಗಳು ಇಲ್ಲದೇ ಪ್ರಕ್ರಿಯೆ ಅನುಸರಿಸದೇ ಸರ್ಕಾರ ರಚನೆ ಆಗಿದೆ. ರಾಷ್ಟ್ರಪತಿ ಆಡಳಿತ ತೆರವಿನ ಕೆಲವೇ ಕ್ಷಣಗಳಲ್ಲಿ ಪ್ರಮಾಣ ವಚನ ಕಾರ್ಯಕ್ರಮ ನಡೆದಿದೆ. ಅವರಿಗೆ ಬಹುಮತ ಇದ್ದರೇ ಸಾಬೀತು ಮಾಡಲಿ. ಅವಸರವಾಗಿ ಯಾಕೆ ಪ್ರಮಾಣ ವಚನ ಸ್ವೀಕರಿಸಬೇಕು ಕೂಡಲೇ ಸುಪ್ರೀಂ ಬಹುಮತ ಸಾಬೀತಿಗೆ ಆದೇಶ ನೀಡಬೇಕೆಂದು ಮನವಿ ಮಾಡಿದ್ದರು.

Leave a Reply