ಕದ್ದುಮುಚ್ಚಿ ಮಾಡೋದು ನಮಗೆ ಗೊತ್ತಿಲ್ಲ: ಬಿಜೆಪಿ ವಿರುದ್ಧ ಠಾಕ್ರೆ ಕೆಂಡ

-ಛತ್ರಪತಿ ಶಿವಾಜಿ ಮಹಾರಾಜರ ಭಾವನೆಗಳ ಮೇಲೆ ಸರ್ಜಿಕಲ್ ಸ್ಟ್ರೈಕ್
-ಬಿಜೆಪಿಯವರದ್ದು ಸ್ವಾರ್ಥ ರಾಜಕಾರಣ

ಮುಂಬೈ: ನಾವು ಏನೇ ಮಾಡಿದರು ಬಹಿರಂಗವಾಗಿ ಮಾಡುತ್ತೇವೆಯೇ ಹೊರತು ಕದ್ದುಮುಚ್ಚಿ ಮಾಡಲ್ಲ ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಮಹಾರಾಷ್ಟ್ರದಲ್ಲಿ ಇಂದು ಬೆಳ್ಳಂಬೆಳಗ್ಗೆ ಸರ್ಕಾರ ರಚಿಸುವ ಮೂಲಕ ಶಿವಸೇನೆ ಮತ್ತು ಕಾಂಗ್ರೆಸ್‍ಗೆ ಬಿಜೆಪಿ ಶಾಕ್ ನೀಡಿತ್ತು. ರಾಜಭವನದ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಿಎಂ ಆಗಿ ದೇವೇಂದ್ರ ಫಡ್ನವೀಸ್ ಮತ್ತು ಡಿಸಿಎಂ ಆಗಿ ಅಜಿತ್ ಪವಾರ್ ಪ್ರಮಾಣ ವಚನ ಸ್ವೀಕರಿಸಿದರು. ಈ ಸಂಬಂಧ ಆಕ್ರೋಶ ವ್ಯಕ್ತಪಡಿಸಿರುವ ಶಿವಸೇನೆ ಮತ್ತು ಎನ್‍ಸಿಪಿ ಜಂಟಿ ಸುದ್ದಿಗೋಷ್ಠಿಯನ್ನು ಕರೆದಿತ್ತು.

ಈ ವೇಳೆ ಮಾತನಾಡಿದ ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ, ನಾವು ಜನಾದೇಶವನ್ನು ಗೌರವಿಸುತ್ತೇವೆ. ರಾಜಕೀಯವಾಗಿ ಏನೇ ಮಾಡಿದರೂ ಬಹಿರಂಗವಾಗಿ ಎಲ್ಲರ ಸಮ್ಮುಖದಲ್ಲಿ ಮಾಡುತ್ತೇವೆ. ರಾಜ್ಯದಲ್ಲಿ ಜಾರಿಯಾಗಿದ್ದ ರಾಷ್ಟ್ರಪತಿ ಆಳ್ವಿಕೆ ಹಿಂಪಡೆಯಲು ಬೆಳಗಿನ ಜಾವ ಕೇಂದ್ರದ ಸಂಪುಟ ಸಭೆ ಕರೆಯಲಾಗಿತ್ತು ಎಂಬುದರ ಮಾಹಿತಿ ಲಭ್ಯವಾಗಿದೆ. ಸಂವಿಧಾನದ ಅನುಸಾರವಾಗಿ ಕೆಲಸಗಳು ನಡೆಯಬೇಕಿತ್ತು ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಅಜಿತ್ ಪವಾರ್ ನಿರ್ಧಾರದೊಂದಿಗೆ ಎನ್‍ಸಿಪಿ ಇಲ್ಲ: ಶರದ್ ಪವಾರ್

ರಾಜ್ಯ ಮತ್ತು ದೇಶದ ಜನತೆ ಎಲ್ಲ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಬಿಜೆಪಿ ನಮ್ಮ ಮೇಲೆ ಹಲವು ಆರೋಪಗಳನ್ನು ಮಾಡುತ್ತಿದೆ. ಆದರೆ ಶಿವಸೇನೆ ಏನೇ ಮಾಡಿದರೂ ನಿರ್ಧರಿಸಿ ಮಾಡುತ್ತದೆ. ಅವರು (ಬಿಜೆಪಿ) ಒಡೆಯುವ ಕೆಲಸ ಮಾಡ್ತಾರೆ, ನಾವು ಏನೇ ಮಾಡಿದರೂ ಜನರನ್ನು ಜೊತೆಯಾಗಿಸುವ ಕೆಲಸ ಮಾಡುತ್ತೇವೆ. ಅವರ ಯೋಚನೆಯಲ್ಲಿ ‘ನಾನು ಕೇವಲ ನಾನು’ ಎಂಬ ಸ್ವಾರ್ಥವಿದ್ದು, ಮೈತ್ರಿಯ ನೈತಿಕ ಮೌಲ್ಯಗಳಿಲ್ಲ. ಇದು ಛತ್ರಪತಿ ಶಿವಾಜಿ ಮಹಾರಾಜರ ಭಾವನೆಗಳ ಮೇಲೆ ಬಿಜೆಪಿ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ ಎಂದು ಉದ್ಧವ್ ಠಾಕ್ರೆ ಕಿಡಿಕಾರಿದರು. ಇದನ್ನೂ ಓದಿ: ಒಡೆದ ಕುಟುಂಬ, ಪಕ್ಷ- ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಲೆ

ಇನ್ನು ಶರದ್ ಪವಾರ್ ಮಾತನಾಡಿ, ಪ್ರಮಾಣವಚನ ಕಾರ್ಯಕ್ರಮದಲ್ಲಿ ಹಾಜರಿದ್ದ 11 ಎನ್‍ಸಿಪಿ ಶಾಸಕರ ಪೈಕಿ ಮೂವರು ನಮ್ಮೊಂದಿಗೆ ಸುದ್ದಿಗೋಷ್ಠಿಯಲ್ಲಿದ್ದಾರೆ. ಸರ್ಕಾರ ರಚನೆ ಮಾಡಿದವರು ಬಹುಮತ ಹೇಗೆ ಸಾಬೀತು ಮಾಡ್ತಾರೆ ಎಂಬುವುದು ಗೊತ್ತಿಲ್ಲ. ನಮ್ಮ ಮೈತ್ರಿ (ಶಿವಸೇನೆ+ಕಾಂಗ್ರೆಸ್+ಎನ್‍ಸಿಪಿ) ಬಳಿ ಬಹುಮತವಿದ್ದು, ಸರ್ಕಾರ ರಚನೆ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ ಸಿಎಂ ಆಗಿ ದೇವೇಂದ್ರ ಫಡ್ನವಿಸ್ ಪ್ರಮಾಣವಚನ

Comments

Leave a Reply

Your email address will not be published. Required fields are marked *