ರಕ್ಷಣಾ ಸಚಿವಾಲಯದ ಸಮಿತಿಯಲ್ಲಿ ಸಾಧ್ವಿ ಪ್ರಜ್ಞಾಗೆ ಸ್ಥಾನ

ನವದೆಹಲಿ: ವಿವಾದಾತ್ಮಕ ಹೇಳಿಕೆಗಳಿಂದಲೇ ಹೆಸರಾಗಿರುವ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ರಕ್ಷಣಾ ಸಚಿವಾಲಯದ ಸಂಸದೀಯ ಸಮಾಲೋಚನಾ ಸಮಿತಿಗೆ ನಾಮನಿರ್ದೇಶನ ಮಾಡಲಾಗಿದೆ.

21 ಸದಸ್ಯರ ಸಂಸದೀಯ ಸಮಾಲೋಚನಾ ಸಮಿತಿಯ ನೇತೃತ್ವವನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಹಿಸಿದ್ದಾರೆ. ಈ ಸಮಿತಿಯಲ್ಲಿ ಪ್ರತಿ ಪಕ್ಷದ ಸದಸ್ಯರಾದ ಫಾರೂಕ್ ಅಬ್ದುಲ್ಲಾ ಮತ್ತು ಎನ್‍ಸಿಪಿ ನಾಯಕ ಶರದ್ ಪವಾರ್ ಅವರು ಇರಲಿದ್ದಾರೆ. ಈ ಸಮಿತಿಗೆ ಸಾಧ್ವಿ ಪ್ರಜ್ಞಾ ಅವರನ್ನು ಆಯ್ಕೆ ಮಾಡಿದ್ದಕ್ಕೆ ಕಾಂಗ್ರೆಸ್ ವಿರೋಧವನ್ನು ವ್ಯಕ್ತಪಡಿಸಿದೆ.

ಈ ವಿಚಾರವಾಗಿ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ಮಾಡಿರುವ ಕಾಂಗ್ರೆಸ್, 21 ಸಂಸತ್ತಿನ ಹಿರಿಯ ಸದಸ್ಯರು ಇರುವ ರಕ್ಷಣಾ ಸಚಿವಾಲಯದ ಸಂಸದೀಯ ಸಮಾಲೋಚನಾ ಸಮಿತಿಗೆ ಸದಾ ವಿವಾದಾತ್ಮಕ ಹೇಳಿಕೆ ನೀಡಿ ಸಮಾಜ ಶಾಂತಿಯನ್ನು ಕದಡುವ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರಿಗೆ ಕೇಂದ್ರ ಸರ್ಕಾರ ಸ್ಥಾನ ನೀಡಿರುವುದು ನಿಜಕ್ಕೂ ವಿಪರ್ಯಾಸ. ಇದನ್ನು ನಾವು ಒಪ್ಪುವುದಿಲ್ಲ ಎಂದು ಮೋದಿ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದೆ.

ವಿವಾದಾತ್ಮಕ ವ್ಯಕ್ತಿಗಳಿಗೆ ಇತರೆ ಪಕ್ಷಗಳು ಸ್ಥಾನ ನೀಡಲು ಯೋಚಿಸುವಾಗ ಬಿಜೆಪಿ ಇವರಿಗೆ ಟೆಕೆಟ್ ನೀಡಿ ಸಂಸದರನ್ನಾಗಿ ಮಾಡಿದೆ. ನ್ಯಾಯಾಲಯದಲ್ಲಿ ಪ್ರಕರಣವನ್ನು ಎದುರಿಸುತ್ತಿರುವ ಅವರನ್ನು ರಕ್ಷಣಾ ಸಚಿವಾಲಯದ ಸಂಸದೀಯ ಸಮಾಲೋಚನಾ ಸಮಿತಿಗೆ ಸೇರಿಸುವುದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ. ಎಲ್ಲವೂ ಸಂವಿಧಾನದಿಂದ ಮಾರ್ಗದರ್ಶಿಸಲ್ಪಟ್ಟಿಲ್ಲ. ನೈತಿಕ ಆಧಾರದ ಮೇಲೆ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಸಂಸತ್ತಿನಲ್ಲಿ ಬಹಳ ಉತ್ತಮ ವ್ಯಕ್ತಿಗಳಿದ್ದಾರೆ. ಅವರನ್ನು ಆಯ್ಕೆ ಮಾಡಿ ಎಂದು ಕಾಂಗ್ರೆಸ್ ಕಾರ್ಯದರ್ಶಿ ಪ್ರಣವ್ ಜಾ ಒತ್ತಾಯಿಸಿದ್ದಾರೆ.

ಈ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿರುವ ಮಧ್ಯಪ್ರದೇಶದ ಕಾನೂನು ಸಚಿವ ಪಿಪಿ ಶರ್ಮಾ, ಬಿಜೆಪಿ ಹೇಳುವುದು ಒಂದು ಮಾಡುವುದು ಇನ್ನೊಂದು. ಆಕೆ ವಿವಾದಾತ್ಮಕ ಹೇಳಿಕೆ ನೀಡಿದಾಗ ಮೋದಿ ಅವರು ಆಕೆ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳುತ್ತಾರೆ. ಆದರೆ ಆನೇಕ ಆರೋಪಗಳಿರುವ ಆಕೆಯನ್ನು ಒಂದು ಮಹತ್ವದ ಸಮಿತಿಗೆ ಆಯ್ಕೆ ಮಾಡಿರುವುದು ದುರದೃಷ್ಟಕರ ಎಂದಿದ್ದಾರೆ.

ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಈ ವರ್ಷದ ಆರಂಭದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಅವರನ್ನು ಸೋಲಿಸಿದ್ದರು. ಇದರ ಜೊತೆಗೆ ರಾಷ್ಟ್ರಪಿತ ಗಾಂಧೀಜಿಯವರನ್ನು ಕೊಂದ ನಾಥುರಾಮ್ ಗೋಡ್ಸೆ ಅವರನ್ನು ಒಬ್ಬ ದೇಶಭಕ್ತ ಎಂದು ಹೇಳಿ ವಿವಾದ ಸೃಷ್ಟಿಸಿದ್ದರು. ಇದನ್ನು ಓದಿ: ಸಾಧ್ವಿ ಪ್ರಜ್ಞಾಸಿಂಗ್‍ರನ್ನು ನಾನು ಕ್ಷಮಿಸಲ್ಲ: ಪ್ರಧಾನಿ ಮೋದಿ

Comments

Leave a Reply

Your email address will not be published. Required fields are marked *