ಸರ್ಕಾರ ಕೆಡವಿದವ್ರ ಸೋಲಿಗೆ ಹೆಚ್‍ಡಿಕೆ ಪಣ – ಐವರು ಅನರ್ಹರ ವಿರುದ್ಧ ಪಂಚತಂತ್ರ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅನರ್ಹರ ಪೈಕಿ 5 ಮಂದಿಯನ್ನು ಸೋಲಿಸಲೇ ಬೇಕು ಅನ್ನೋ ಹಟಕ್ಕೆ ಬಿದ್ದಿದ್ದಾರೆ.

ತಮಗೆ ಕೈ ಕೊಟ್ಟು ಅನರ್ಹರಾದ ತಮ್ಮದೇ ಪಕ್ಷದವರಾಗಿದ್ದ ವಿಶ್ವನಾಥ್, ಗೋಪಾಲಯ್ಯ ಹಾಗೂ ನಾರಾಯಣಗೌಡರು ಕುಮಾರಸ್ವಾಮಿಯವರ ಮೊದಲ ಟಾರ್ಗೆಟ್ ಆಗಿದೆ. ಹೀಗಾಗಿ ಹುಣಸೂರು, ಕೆ.ಆರ್.ಪೇಟೆ ಹಾಗೂ ಮಹಾಲಕ್ಷ್ಮಿ ಲೇಔಟ್ ನಲ್ಲಿ ಈ ಮೂವರನ್ನು ಸೊಲಿಸಲೇಬೇಕು ಎಂದು ಪಣ ತೊಟ್ಟು ತಮ್ಮ ಕಾರ್ಯಕರ್ತರಿಗೆ ಸೂಚನೆ ಕೊಟ್ಟಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ.

ಏನೇ ಆಗಲಿ ಈ ಮೂರು ಕ್ಷೆತ್ರಗಳಲ್ಲಿ ನಾವೇ ಗೆಲ್ಲಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಗೆಲ್ಲಲಿ ಅವರು ಮಾತ್ರ ಗೆಲ್ಲಬಾರದು ಅಂತ ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ಅಷ್ಟಕ್ಕೆ ಸೀಮಿತವಾಗದೆ ಮಾಜಿ ದೋಸ್ತಿ ಪಕ್ಷದಿಂದ ಬಂಡೆದ್ದು ಹೋದ ಇನ್ನಿಬ್ಬರು ಅನರ್ಹರ ಮೇಲೂ ಕುಮಾರಸ್ವಾಮಿ ಹಟಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಉಪಸಮರ: ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ

ಇತ್ತ ಹೊಸಕೋಟೆಯಲ್ಲಿ ಎಂಟಿಬಿ ನಾಗರಾಜ್ ಹಾಗೂ ಯಶವಂತಪುರದಲ್ಲಿ ಎಸ್.ಟಿ ಸೋಮಶೇಖರ್ ಗೆಲ್ಲಬಾರದು. ಅದಕ್ಕೆ ಈಗಾಗಲೇ ಹೊಸಕೋಟೆಯಲ್ಲಿ ಹೆಚ್‍ಡಿಕೆ, ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೆಗೌಡರಿಗೆ ಬೆಂಬಲ ಕೊಟ್ಟಿದ್ದಾರೆ. ಬಚ್ಚೆಗೌಡರೊಂದಿಗಿನ ಮುನಿಸನ್ನು ಬದಿಗಿಟ್ಟು ಎಂಟಿಬಿ ನಾಗರಾಜ್ ರನ್ನ ಸೋಲಿಸಲೇಬೇಕು ಅನ್ನೋ ಹಟದಲ್ಲಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ಯಶವಂತಪುರದಲ್ಲಿಯೂ ಎಸ್.ಟಿ ಸೋಮಶೇಖರ್ ಸೋಲಿಸಬೇಕು. ಅದಕ್ಕಾಗಿ ಕ್ಷೇತ್ರದ ಪ್ರಮುಖ ನಾಯಕರುಗಳ ಮನೆಗೆ ಸಹ ಭೇಟಿಗೆ ಮುಂದಾಗಿದ್ದಾರೆ ಎನ್ನಲಾಗಿದೆ.

ಒಟ್ಟಿನಲ್ಲಿ ತಮ್ಮ ಸರ್ಕಾರ ಕೆಡವಲು ಕಾರಣರಾದ ತಮ್ಮದೇ ಪಕ್ಷದ ಶಾಸಕರಾಗಿದ್ದವರ ಬಗೆಗಿನ ಸಿಟ್ಟು ಒಂದೆಡೆಯಾದರೆ, ಮತ್ತೊಂದೆಡೆ ಸರ್ಕಾರ ಕೆಡವಲು ಮಹತ್ವದ ಪಾತ್ರ ವಹಿಸಿದ್ದ ಇನ್ನಿಬ್ಬರು ಸೇರಿ ಒಟ್ಟು 5 ಮಂದಿ ಅನರ್ಹರು ಮಾಜಿ ಸಿಎಂ ಟಾರ್ಗೆಟ್ ಆಗಿರುವುದು ಕುತೂಹಲವಾಗಿದೆ.

Comments

Leave a Reply

Your email address will not be published. Required fields are marked *