ಅಯೋಧ್ಯೆ, ಕಾಶ್ಮೀರ ವಿಷಯದಲ್ಲಿ ಮೂಗು ತೂರಿಸಿದ ಪಾಕಿಗೆ ಚಳಿ ಬಿಡಿಸಿದ ಭಾರತದ ಅಧಿಕಾರಿ

– ವಿಶ್ವಸಂಸ್ಥೆಯಲ್ಲಿ ಮುಜುಗರಕ್ಕೀಡಾದ ಪಾಕ್

ಪ್ಯಾರಿಸ್: ಕಾಶ್ಮೀರ ಮತ್ತು ಅಯೋಧ್ಯೆ ವಿಚಾರದಲ್ಲಿ ಮೂಗು ತೂರಿಸಿದ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆಯಲ್ಲಿ ಭಾರತದ ಅಧಿಕಾರಿ ಚಳಿ ಬಿಡಿಸಿದ್ದಾರೆ. ಈ ಮೂಲಕ ಮತ್ತೊಮ್ಮೆ ಪಾಕಿಸ್ತಾನ ಜಾಗತಿಕ ಮಟ್ಟದಲ್ಲಿ ಮುಜುಗರಕ್ಕೀಡಾಗಿದೆ.

ಯುನೆಸ್ಕೋ(UNESCO)ದ 40ನೇ ಸಾಮಾನ್ಯ ಸಭೆ(ಜನರಲ್ ಕಾನ್ಫರೆನ್ಸ್)ಯಲ್ಲಿ ಕಾಶ್ಮೀರ ಮತ್ತು ಅಯೋಧ್ಯೆ ವಿಷಯಗಳನ್ನು ಪಾಕಿಸ್ತಾನ ಪ್ರಸ್ತಾಪ ಮಾಡಿತು. ಈ ಎರಡು ಭಾರತದ ಆಂತರಿಕ ವಿಚಾರಗಳಾಗಿವೆ. ಹಾಗಾಗಿ ಪಾಕಿಸ್ತಾನ ಇದರಲ್ಲಿ ಹಸ್ತಕ್ಷೇಪ ಮಾಡದಿರುವುದೇ ಉತ್ತಮ ಹಾಗೂ ಈ ವಿಷಯಗಳಲ್ಲಿ ನಮ್ಮ ಮೇಲೆ ಯಾವುದೇ ಒತ್ತಡ ಹಾಕುವಂತಿಲ್ಲ ಎಂದು ಭಾರತದ ಪ್ರತಿನಿಧಿ ಖಡಕ್ ಆಗಿ ಯುನೆಸ್ಕೋದಲ್ಲಿ ಹೇಳಿದ್ದಾರೆ.

ನಾವು ಪಾಕಿಸ್ತಾನದ ದುಷ್ಟಬುದ್ಧಿ ಮತ್ತು ಸುಳ್ಳು ಪ್ರಚಾರವನ್ನು ಬಲವಾಗಿ ಖಂಡಿಸುತ್ತೇವೆ. ಪಾಕಿಸ್ತಾನ ತನ್ನ ಸುಳ್ಳುಗಳಿಂದ ಭಾರತದ ಗೌರವಕ್ಕೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದೆ. ಭಾರತದ ಸವೋಚ್ಛ ನ್ಯಾಯಾಲಯ ನೀಡಿದ ಅಯೋಧ್ಯೆ ತೀರ್ಪನ್ನು ಪಾಕಿಸ್ತಾನ ಟೀಕಿಸುವ ಮೂಲಕ ನ್ಯಾಯಾಂಗ ನಿಂದನೆ ಮಾಡುತ್ತಿದೆ. ಅಯೋಧ್ಯೆ ವಿಷಯ ಸಂಪೂರ್ಣವಾಗಿ ಭಾರತದ ಆಂತರಿಕ ವಿಚಾರವಾಗಿದ್ದು, ಪಾಕಿಸ್ತಾನಕ್ಕೆ ಈ ಬಗ್ಗೆ ಮಾತನಾಡುವ ಯಾವುದೇ ಹಕ್ಕಿಲ್ಲ ಎಂದು ತಿರುಗೇಟು ನೀಡಿದರು.

ಪಾಕಿಸ್ತಾನದ ಶಿಕ್ಷಣ ಮಂತ್ರಿ ಶಫಾಕತ್ ಮಹಮೂದ್ ಅಯೋಧ್ಯೆಯ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಅಸಮಾಧಾನ ಹೊರಹಾಕುತ್ತಾ, ಯುನೆಸ್ಕೋದ ಧಾರ್ಮಿಕ ಸ್ವಾತಂತ್ರ್ಯದ ಮೌಲ್ಯಗಳಿಗೆ ಅನುಗುಣವಾಗಿ ತೀರ್ಪು ಬಂದಿಲ್ಲ ಎಂದು ಮೂಗು ತೂರಿಸುವ ಪ್ರಯತ್ನ ಮಾಡಿದ್ದರು.

ಶಫಾಕತ್‍ಗೆ ತಿರುಗೇಟು ನೀಡಿದ ಭಾರತದ ಪ್ರತಿನಿಧಿ, ಜೀವನದ ಅಧಿಕಾರ (Right To life) ದೇಶದ ಮೂಲಭೂತ ಅಧಿಕಾರವಾಗಿದೆ. ವಿಶ್ವಮಟ್ಟದಲ್ಲಿ ಈ ಅಧಿಕಾರಕ್ಕೆ ಭಯೋತ್ಪಾದನೆ ದೊಡ್ಡ ವಿಘ್ನವಾಗಿದೆ. ಪಾಕಿಸ್ತಾನ ಭಯೋತ್ಪಾದನೆಯ ಉತ್ಪಾದಕ ಕೇಂದ್ರ ಮತ್ತು ರಪ್ತು ಮಾಡುವ ದೇಶವಾಗಿದೆ. ಪಾಕಿಸ್ತಾನದ ರಾಜಕಾರಣದಲ್ಲಿ ಭಯೋತ್ಪಾದನೆ ಬೇರೂರಿದೆ. ಪಾಕಿಸ್ತಾನದ ಮೂಲಕವೇ ಭಯೋತ್ಪಾದನೆ ಮುಖ್ಯವಾಹಿನಿಗೆ ಬರುತ್ತಿದೆ ಎಂಬುವುದು ವಿಶ್ವಮಟ್ಟದಲ್ಲಿ ಗೊತ್ತಾಗಿದೆ ಎಂದು ಚಳಿ ಬಿಡಿಸಿದರು.

ಇದೇ ವೇಳೆ ಪಾಕಿಸ್ತಾನ ಕಾಶ್ಮೀರದ ವಿಚಾರವನ್ನು ಪ್ರಸ್ತಾಪ ಮಾಡಿತು. ಜಮ್ಮು-ಕಾಶ್ಮೀರ ಮತ್ತು ಲಡಾಖ್ ಮೂರು ಭಾರತದ ಅವಿಭಾಜ್ಯ ಅಂಗಗಳಾಗಿವೆ. ಈ ಮೂರು ಭಾಗಗಳು ಯಾವಾಗಲೂ ಭಾರತದ ಅಂಗಗಳಾಗಿಯೇ ಇರಲಿವೆ. ಇದರಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಸಹ ಸೇರಿದೆ. ಪಾಕಿಸ್ತಾನ ಕಾನೂನುಬಾಹಿರ ಮತ್ತು ಬಲವಂತವಾಗಿ ಕಾಶ್ಮೀರದ ಭಾಗವನ್ನು ಆಕ್ರಮಿಸಿಕೊಂಡಿದೆ ಎಂದು ಭಾರತದ ಪ್ರತಿನಿಧಿ ಆರೋಪಿಸಿದರು.

 

Comments

Leave a Reply

Your email address will not be published. Required fields are marked *