ಹೊಸಕೋಟೆ, ಕಾಗವಾಡ, ಗೋಕಾಕ್‌ನಲ್ಲಿ ಬಿಜೆಪಿಗೆ ಬಂಡಾಯದ ಬಿಸಿ!

ಬೆಂಗಳೂರು: ಅನರ್ಹರ ತೀರ್ಪು ಬೆನ್ನಲ್ಲೇ ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿದೆ. ಮೂವರು ನಾಯಕರು ಪಕ್ಷದಿಂದ ಹೊರ ಬಂದಿದ್ದಾರೆ. ಒಬ್ಬರು ಪಕ್ಷೇತರರಾಗಿ ಕಣಕ್ಕಿಳಿಯುತ್ತಿದ್ದರೆ, ಇಬ್ಬರು ಕೈ ಪಡೆ ಸೇರಿಕೊಂಡಿದ್ದಾರೆ.

ಅನರ್ಹ ಶಾಸಕರು ಬಿಜೆಪಿಗೆ ಸೇರ್ಪಡೆ ಆಗುತ್ತಿರುವ ಹೊತ್ತಲ್ಲೇ ಬಿಜೆಪಿಯಲ್ಲಿ ಬಂಡಾಯ ಬಾವುಟ ಹಾರಿದೆ. ಸಿಎಂ ಯಡಿಯೂರಪ್ಪ ಅನರ್ಹರ ಜೊತೆ ಮೀಟಿಂಗ್ ಮಾಡಿದ ಬೆನ್ನಲ್ಲೇ ಹೊಸಕೋಟೆಯ ಶರತ್ ಬಚ್ಚೇಗೌಡ ಇದೀಗ ಪಕ್ಷೇತರ ಅಭ್ಯರ್ಥಿಯಾಗಿ ರಣಕಹಳೆ ಮೊಳಗಿಸಿದ್ದಾರೆ. ಸುಪ್ರೀಂಕೋರ್ಟ್ ತೀರ್ಪಿಗಾಗಿ ಕಾಯ್ತಿದ್ದ ಶರತ್ ಬಚ್ಚೇಗೌಡ, ಅಧಿಕೃತವಾಗಿ ಬಂಡಾಯದ ಬಾವುಟ ಹಾರಿಸಿದ್ದಾರೆ. ಪಕ್ಷದ ವಾರ್ನಿಂಗ್ ಗೂ ಬೆದರದೆ, ಬಿಜೆಪಿಗೆ ಸೇರ್ಪಡೆ ಆಗುತ್ತಿರುವ ಎಂಟಿಬಿ ನಾಗರಾಜ್ ಪಕ್ಷೇತರನಾಗಿ ಇಂದು ನಾಮಪತ್ರ ಸಲ್ಲಿಸುತ್ತಿದ್ದಾರೆ.

ಬುಧವಾರ ಹೊಸಕೋಟೆಯ ಉಪ್ಪಾರಹಳ್ಳಿಯಲ್ಲಿ ಕಾರ್ಯಕರ್ತರ ಜೊತೆ ಸಭೆ ನಡೆಸಿದ ಶರತ್, ಮಂಡ್ಯದಲ್ಲಿ ಯಾರು ಏನೇ ಮಾಡಿದರೂ ಸ್ವಾಭಿಮಾನ ಅಂತ ಸುಮಲತಾ ಅವರಿಗೆ ಮಂಡ್ಯದ ಜನ ಬೆಂಬಲ ನೀಡಿ ಗೆಲ್ಲಿಸಿದರು. ತಾಲೂಕಿನ ಜನ, ಕಾರ್ಯಕರ್ತರ ಆಸೆಯಂತೆ ಪಕ್ಷೇತರನಾಗಿ ಸ್ಪರ್ಧೆ ಮಾಡುತ್ತಿದ್ದೇನೆ ಅಂದಿದ್ದಾರೆ.

ಶರತ್‍ಗೆ ಜೆಡಿಎಸ್ ಬೆಂಬಲ!
ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸ್ತಿರೋ ಶರತ್ ಬಚ್ಚೇಗೌಡಗೆ ಜೆಡಿಎಸ್ ಬೆಂಬಲ ಘೋಷಿಸಿದೆ. ಎಂಟಿಬಿ ನಾಗರಾಜ್‍ಗೆ ಸೋಲಿಸಬೇಕು ಅಂತ ಕತ್ತಿ ಮಸಿಯುತ್ತಿದ್ದ ಕುಮಾರಸ್ವಾಮಿಗೆ ಶರತ್ ಅಸ್ತ್ರವಾಗಿದ್ದಾರೆ. ತಂದೆ ದೇವೇಗೌಡರು ಟೀಕೆ ಮಾಡಿದ್ದರೂ ಲೆಕ್ಕಿಸದೇ, ಶರತ್‍ಗೆ ನನ್ನ ಬೆಂಬಲವಿದೆ ಅಂತ ಕುಮಾರಸ್ವಾಮಿ ಹೇಳಿದರು. ಶರತ್ ಪರವಾಗಿ ನಿಖಿಲ್ ಕುಮಾರಸ್ವಾಮಿ ಕೂಡ ಸಾಥ್ ನೀಡಲಿದ್ದಾರೆ. ಅಂದಹಾಗೆ, ಶರತ್ ತಂದೆ ಬಚ್ಚೇಗೌಡ ಈ ಹಿಂದೆ ಜೆಡಿಎಸ್‍ನಲ್ಲೇ ಇದ್ದು ಸಚಿವರಾಗಿದ್ದವರು. ನಂತರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇದೀಗ, ಶರತ್‍ಗೆ ಕುಮಾರಸ್ವಾಮಿ ಬೆಂಬಲ ರಾಜಕೀಯ ಅಚ್ಚರಿಯಾಗಿದೆ.

ಕಾಂಗ್ರೆಸ್ಸಿಗೆ ರಾಜು, ಅಶೋಕ್!
ಹೊಸಕೋಟೆ ಮಾತ್ರವಲ್ಲ, ಕಾಗವಾಡದ ರಾಜುಕಾಗೆ, ಗೋಕಾಕ್‍ನ ಅಶೋಕ್ ಪೂಜಾರಿ ಕೂಡ ಕಾಂಗ್ರೆಸ್ಸಿಗೆ ಸೇರುತ್ತಿದ್ದಾರೆ. ಉಮೇಶ್ ಕತ್ತಿ ಮೂಲಕ ಸಿಎಂ ಮಾಡಿದ ಓಲೈಕೆಗೆ ಬಗ್ಗದ ರಾಜು ಕಾಗೆ, ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ಬಿಜೆಪಿಗೆ ಸಡ್ಡು ಹೊಡೆದಿದ್ದಾರೆ. ಕಾಂಗ್ರೆಸ್ ಸೇರ್ಪಡೆ ಆಗಲಿರುವ ರಾಜು ಕಾಗೆ, ಕಾಗವಾಡದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿಯೋದು ಫಿಕ್ಸ್ ಆಗಿದೆ. ಇತ್ತ ಗೋಕಾಕ್ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಅಶೋಕ್ ಪೂಜಾರಿ ಕೂಡ ಕಾಂಗ್ರೆಸ್ ಸೇರ್ಪಡೆ ಖಚಿತವಾಗಿದೆ. ಈ ಇಬ್ಬರು ನಾಯಕರು ಕೈ ಹಿಡಿಯಲಿದ್ದಾರೆ.

ಒಟ್ಟಿನಲ್ಲಿ ಮೂಲ ಬಿಜೆಪಿಗರು ಟಿಕೆಟ್ ಸಿಗದಿದ್ದಕ್ಕೆ ಪಕ್ಷದ ವಿರುದ್ಧ ತಿರುಗಿ ನಿಂತಿದ್ದಾರೆ. ಬಿಜೆಪಿಗೆ ಮೊದಲ ಬಂಡಾಯದ ಬಿಸಿ ತಟ್ಟಿದೆ.

Comments

Leave a Reply

Your email address will not be published. Required fields are marked *