ಕೆರೆ ಕಟ್ಟೆ ಒಡೆದು ಶಾಲಾ ಆವರಣಕ್ಕೆ ನುಗ್ಗಿದ ನೀರು- ಮುಳುಗೋಯ್ತು ಬುಕ್ಸ್, ಫೈಲ್ಸ್

ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ಮಳೆ ತಂದ ಅವಾಂತರ ಎಲ್ಲರಿಗೂ ಗೊತ್ತೇ ಇದೆ. ಶಾಲಾ ಮಕ್ಕಳ ಬಟ್ಟೆ ಬರೆ, ಪುಸ್ತಕ, ಬ್ಯಾಗ್ ಎಲ್ಲವೂ ಮಳೆ ನೀರಿಗೆ ಆಹುತಿಯಾಗಿ ಮಕ್ಕಳಿಗೆ ತೊಂದರೆಯಾಗಿತ್ತು. ಅದೇ ರೀತಿಯ ತೊಂದರೆಯನ್ನು ಇದೀಗ ಬೆಂಗಳೂರಿನ ಶಾಲೆಯೊಂದರ ಮಕ್ಕಳು ಅನುಭವಿಸುತ್ತಿದ್ದಾರೆ. ಈ ಶಾಲೆ ಸಮೀಪದಲ್ಲಿದ್ದ ಕರೆ ಕಟ್ಟೆ ಒಡೆದು, ಶಾಲಾ ಆವರಣಕ್ಕೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರೋ ಶ್ರೀಶಾರದಾಂಭ ಶಾಲೆ ಆವರಣಕ್ಕೆ ಕೆರೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಮಳೆಯಿಂದ ಹೊಸಕೆರೆಹಳ್ಳಿ ಕೆರೆಯ ಕೋಡಿ ಒಡೆದು ಮನೆಗಳಿಗೆ ನೀರು ನುಗ್ಗಿತ್ತು. ಜೊತೆಗೆ ಈ ಶಾಲೆಯ ಆವರಣಕ್ಕೂ ನೀರು ನುಗ್ಗಿದ್ದು, ಗ್ರೌಂಡ್‌ಫ್ಲೋರ್‌ನಲ್ಲಿ ಕೊಠಡಿಗಳಿಗೆ ನೀರು ನುಗಿ ಪುಸ್ತಕ, ಫೈಲ್ಸ್, ಕಂಪ್ಯೂಟರ್ ಎಲ್ಲವೂ ಹಾನಿಗೊಂಡಿವೆ. ಅಷ್ಟೇ ಅಲ್ಲದೆ ಒಂದು ಕಡೆ ಬಿಸಿಲಿಗೆ ಮಕ್ಕಳ ಪುಸ್ತಕಗಳ ಜೊತೆ ಅನೇಕ ದಾಖಲೆಗಳ ಕಡತಗಳನ್ನ ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿ ಒಣ ಹಾಕುತ್ತಿದ್ದರೆ, ಮತ್ತೊಂದು ಕಡೆ ನೀರನ್ನು ಹೊರಹಾಕಿ ಶಾಲಾ ಆವರಣವನ್ನ ಸಿಬ್ಬಂದಿ ಸ್ವಚ್ಛಗೊಳಿಸುತ್ತಿದ್ದಾರೆ.

ಭಾನುವಾರ ಬೆಳಗ್ಗೆ ಕರೆ ನೀರು ಶಾಲೆಗೆ ನುಗ್ಗಿದೆ. ಎರಡು ದಿನದಿಂದ ನಾವೆಲ್ಲ ಸೇರಿಕೊಂಡು ನೀರು ಹೊರಹಾಕುವ ಕೆಲಸ ಮಾಡುತ್ತಿದ್ದೇವೆ. ಬಿಬಿಎಂಪಿ ಕಡೆಯಿಂದ ಒಂದು ಮೋಟಾರ್ ಕೊಟ್ಟಿದ್ದಾರೆ. ಅದನ್ನ ಬಿಟ್ಟರೆ ಬೇರೆ ಯಾವ ಸಹಾಯವೂ ಇಲ್ಲಿವರೆಗೆ ಸಿಕ್ಕಿಲ್ಲ. ಶಾಲೆಯ ಪರಿಸ್ಥಿತಿ ನೋಡಿ ಮಕ್ಕಳಿಗೆ ರಜೆ ನೀಡಿದ್ದೇವೆ. ಸಂಪೂರ್ಣವಾಗಿ ಶಾಲೆ ಸ್ವಚ್ಛವಾದ ಮೇಲೆನೇ ಶಾಲೆಯನ್ನ ತೆರೆಯಲಾಗುತ್ತದೆ ಎಂದು ಶಿಕ್ಷಕರು ತಿಳಿಸಿದ್ದಾರೆ. ಇತ್ತ ಮಕ್ಕಳು ನಮ್ಮ ಪುಸ್ತಕಗಳೆಲ್ಲಾ ನೀರಿಗೆ ನೆಂದು ಹೋಗಿದೆ, ಕೆಟ್ಟ ವಾಸನೆ ಬೇರೆ ಬರುತ್ತಿದೆ. ಯಾವಾಗ ಸರಿಯಾಗುತ್ತೋ ಎಂದು ಕಾಯುತ್ತಿದ್ದಾರೆ.

ಬಿಬಿಎಂಪಿ ಹಾಗೂ ಅಗ್ನಿಶಾಮಕ ದಳಕ್ಕೆ ಶಾಲೆಗೆ ನೀರು ನುಗ್ಗಿರುವ ಬಗ್ಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಒಂದು ಬಾರಿ ಬಂದು ನೋಡಿಕೊಂಡು ಹೋದವವರು ಮತ್ತೆ ಇತ್ತ ತಲೆಹಾಕಿಲ್ಲ. ನಮ್ಮ ಬಿಬಿಎಂಪಿ ಸಿಬ್ಬಂದಿ ಮಾತ್ರ ಮಳೆಯಿಂದ ಯಾವುದೇ ಅನಾಹುತ ಆಗೋದಕ್ಕೆ ಬಿಡಲ್ಲ, ನಾವು ಸಂಪೂರ್ಣ ಬಂದೋ ಬಸ್ತ್ ಮಾಡಿದ್ದೇವೆ ಎಂದು ಹೇಳುತ್ತಾರೆಯೇ ಹೊರತು, ಕ್ರಮ ತೆಗೆದುಕೊಳ್ಳಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

Comments

Leave a Reply

Your email address will not be published. Required fields are marked *