ಶುಲ್ಕ ಹೆಚ್ಚಳ ವಿರೋಧಿಸಿ ಜೆಎನ್‍ಯುನಲ್ಲಿ ಪ್ರತಿಭಟನೆ – ಎಷ್ಟಿದ್ದ ಶುಲ್ಕ ಎಷ್ಟು ಹೆಚ್ಚಳವಾಗಿದೆ?

– ತಾರಕಕ್ಕೇರಿದ ವಿದ್ಯಾರ್ಥಿಗಳ ಪ್ರತಿಭಟನೆ
– ವೆಂಕಯ್ಯ ನಾಯ್ಡು ಇರುವಾಗಲೇ ಪ್ರತಿಭಟನೆ

ನವದೆಹಲಿ: ಜವಹಾರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಮತ್ತೆ ಹೈಡ್ರಾಮಾ ನಡೆದಿದ್ದು, ಶುಲ್ಕ ಹೆಚ್ಚಳ ಖಂಡಿಸಿ, ನೂರಾರು ವಿದ್ಯಾರ್ಥಿಗಳು ವಿವಿ ಹೊರ ಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಜೆಎನ್‍ಯು ಹೊರಗಡೆ ಜಮಾಯಿಸಿ, ಹಾಸ್ಟೆಲ್ ಕೈಪಿಡಿ ಹಿಂಪಡೆಯಬೇಕು ಹಾಗೂ ಶುಲ್ಕವನ್ನು ಹೆಚ್ಚಳ ಮಾಡಬಾರದು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಒಂದು ವಾರದಿಂದ ಪ್ರತಿಭಟನೆ ನಡೆಯುತ್ತಿದ್ದು, ಭಾರೀ ಪೊಲೀಸ್ ಹಾಗೂ ಸಿಆರ್‍ಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು 3ನೇ ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದ ಸಮಯದಲ್ಲೇ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.

ಕ್ಯಾಂಪಸ್ ಮುಂದೆ ಹೆಚ್ಚಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು, ಕೆಲವು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿದ್ಯಾರ್ಥಿನಿಲಯದ ಶುಲ್ಕದ ಕೈಪಿಡಿಯ ಸಮಸ್ಯೆಗಳನ್ನು ಪರಿಹರಿಸಲು ಉಪಕುಲಪತಿಯವರನ್ನು ಒತ್ತಾಯಿಸುತ್ತಿದ್ದಾರೆ. ಇದೇ ವೇಳೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು 3ನೇ ಘಟಿಕೋತ್ಸವವನ್ನುದ್ದೇಶಿಸಿ ಭಾಷಣ ಮಾಡುತ್ತಿರುವುದರಿಂದ ಭಾರೀ ಭದ್ರತೆಯನ್ನು ಕಲ್ಪಿಸಲಾಗಿದೆ.

ವಿಶ್ವವಿದ್ಯಾಲಯ ‘ವಿದ್ಯಾರ್ಥಿ ವಿರೋಧಿ ನೀತಿ’ಯನ್ನು ಅನುಸರಿಸುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಹಾಸ್ಟೆಲ್ ಕೈಪಿಡಿಯನ್ನು ಹಿಂಪಡೆಯುವಂತೆ ವಿದ್ಯಾರ್ಥಿ ಸಂಘವು ವಿಶ್ವವಿದ್ಯಾಲಯವನ್ನು ಒತ್ತಾಯಿಸಿದೆ. ಶುಲ್ಕ ಇಳಿಕೆ ವಿದ್ಯಾರ್ಥಿಗಳ ಪ್ರಮುಖ ಬೇಡಿಕೆಯಾಗಿದ್ದು, ಹಾಸ್ಟೆಲ್ ಕೈಪಿಡಿಯಲ್ಲಿ ಉಲ್ಲೇಖಿಸಿರುವ ‘ಡ್ರೆಸ್ ಕೋಡ್’ನ್ನು ಸಹ ವಿದ್ಯಾರ್ಥಿ ಸಂಘ ವಿರೋಧಿಸಿದೆ.

ಶುಲ್ಕ ಎಷ್ಟು ಹೆಚ್ಚಳವಾಗಿದೆ?
ವಿಶ್ವವಿದ್ಯಾಲಯದ ಹಾಸ್ಟೆಲ್‍ಗೆ ಇತ್ತೀಚೆಗೆ ಇದ್ದಕ್ಕಿದ್ದಂತೆ ಹೆಚ್ಚಿಸಲಾಗಿತ್ತು. ಪ್ರತಿ ತಿಂಗಳು ಡಬಲ್ ಸೀಟರ್‍ಗೆ 10 ರೂ.ನಿಂದ 300 ರೂ.ಗೆ ಹಾಗೂ ಸಿಂಗಲ್ ಸೀಟರ್‍ಗೆ 20 ರೂ.ನಿಂದ 600 ರೂ.ಗೆ ಶುಲ್ಕವನ್ನು ಹೆಚ್ಚಿಸಲಾಗಿತ್ತು. ಮೆಸ್ ಸೆಕ್ಯೂರಿಟಿ ಡಿಪಾಸಿಟ್ ಎಂದು ಪಡೆಯುತ್ತಿದ್ದ ಅಡ್ವಾನ್ಸ್ ಹಣವನ್ನು 5,500 ರೂ.ನಿಂದ 12 ಸಾವಿರಕ್ಕೆ ಹೆಚ್ಚಿಸಲಾಗಿತ್ತು. ಮುಂಗಡವಾಗಿ ಪಡೆದ ಈ ಶುಲ್ಕವನ್ನು ಮರುಪಾವತಿಸಲಾಗುತ್ತದೆ.

Comments

Leave a Reply

Your email address will not be published. Required fields are marked *