ಬೆಳಗಾವಿ ಪಾಲಿಟಿಕ್ಸ್‌ಗೆ ಮತ್ತೆ ಡಿಕೆಶಿ ಎಂಟ್ರಿ- ರೋಚಕ ವಿದ್ಯಮಾನಕ್ಕೆ ಸಾಕ್ಷಿಯಾಗುತ್ತಾ ಗೋಕಾಕ್?

ಬೆಂಗಳೂರು: ಜಿಲ್ಲೆಯ ಅತೃಪ್ತ ಶಾಸಕರ ಅಸಮಾಧಾನ ಬೆಂಕಿನೇ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಅಧಿಕಾರಕ್ಕೆ ಬರಲು ಮುಖ್ಯ ಕಾರಣ. ಇಷ್ಟು ದಿನ ಕೊಂಚ ಶಾಂತಗೊಂಡಿದ್ದ ಕ್ಷೇತ್ರಕ್ಕೆ ಈಗ ಮತ್ತೆ ಬಂಡೆ ಕಾಲಿಡೋಕೆ ಪ್ಲಾನ್ ಮಾಡ್ತಿದ್ದಾರೆ ಎನ್ನಲಾಗಿದೆ.

ಹೌದು. ರಾಜ್ಯ ರಾಜಕಾರಣದಲ್ಲಿ ಬೆಳಗಾವಿ ಅಂದರೇನೆ ಈಗ ರಾಜಕಾರಣಿಗಳು ಭಯಬೀಳುತ್ತಾರೆ. ಮೈತ್ರಿ ಸರ್ಕಾರ ಪತನಕ್ಕೆ, ಶಾಸಕರ ಮುನಿಸು ಸ್ಫೋಟಗೊಳ್ಳೋಕೆ ಮುಖ್ಯ ಕಾರಣ ಬೆಳಗಾವಿ ಪಾಲಿಟಿಕ್ಸ್ ಎನ್ನಲಾಗುತ್ತಿದೆ.

ಹಿಂದೆ ಕನಕಪುರ ಬಂಡೆ ಬೆಳಗಾವಿ ರಾಜಕಾರಣದಲ್ಲಿ ಎಂಟ್ರಿಯಾಗಿದ್ದಕ್ಕೆ ಸಾಹುಕಾರರು ಸಿಡಿದೆದ್ದಿದ್ದರು. ಪರಿಣಾಮ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರವೇ ಪತನವಾಯ್ತು. ನಂತರ ಡಿಕೆಶಿ ಕೂಡ ತಣ್ಣಗಾಗಿದ್ದರು. ಆದರೆ ಇಡಿಯಿಂದ ಬಂಧನವಾಗಿ ಜೈಲಿಗೆ ಹೋಗಿ ಬಂದ ಬಳಿಕ ಡಿಕೆ ಎಲ್ಲೆಡೆ ಶಕ್ತಿಪ್ರದರ್ಶಿಸ್ತಿದ್ದಾರೆ. ಮೊದಲನೆಯದಾಗಿ ಟಗರು ಅಡ್ಡಾದಲ್ಲೇ ಡಿಚ್ಚಿಕೊಟ್ಟಿದ್ದಾರೆ. ಈಗ ಡಿಕೆ ಕಣ್ಣು ಮತ್ತೆ ಕುಂದಾನಗರಿಯತ್ತ ಹೊರಳಿದೆ.

ಈ ಅನುಮಾನಕ್ಕೆ ಕಾರಣವಾಗಿದ್ದು ಬಿಜೆಪಿ ಮಾಜಿ ಶಾಸಕ ರಾಜು ಕಾಗೆ ಭೇಟಿ. ಕಾಗವಾಡದಲ್ಲಿ ಅನರ್ಹ ಶಾಸಕ ಶ್ರೀಮಂತ್ ಪಾಟೀಲ್‍ಗೆ ಬಿಜೆಪಿ ಮಣೆ ಹಾಕಲು ಮುಂದಾಗಿರೋದನ್ನು ವಿರೋಧಿಸಿ ರಾಜು ಕಾಗೆ ಬಂಡಾಯ ಎದ್ದಿದ್ದಾರೆ. ಕಾಂಗ್ರೆಸ್‍ನತ್ತ ಚಿತ್ತ ಹರಿಸಿದ್ದಾರೆ. ಇದರ ಭಾಗವಾಗಿ ಭಾನುವಾರ ರಾಜು ಕಾಗೆ, ಬೆಂಗಳೂರಿನಲ್ಲಿ ಮಾಜಿ ಸಚಿವ ಡಿಕೆ ಶಿವಕುಮಾರ್ ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಅಂದು ಬೆಳಗಾವಿ ರಾಜಕಾರಣದಲ್ಲಿ ತಲೆಹಾಕಿದ್ದಕ್ಕೆ ಸಾಹುಕಾರರು ಸಮರ ಸಾರಿದ್ದರು. ಆದರೆ ಇಷ್ಟು ದಿನ ಸೈಲೆಂಟ್ ಆಗಿ, ಈಗ ಎಲ್ಲೆಡೆ ಓಡಾಡುತ್ತಿರುವ ಡಿಕೆಶಿ ಗೋಕಾಕ್ ಪಾಲಿಟಿಕ್ಸ್‍ನಲ್ಲಿ ಮತ್ತೆ ಮೂಗು ತೂರಿಸ್ತಾರಾ ಅನ್ನೋ ಪ್ರಶ್ನೆ ಎದ್ದಿದೆ. ಒಂದೆಡೆ, ರಮೇಶ್ ಜಾರಕಿಹೊಳಿ ವಿರುದ್ಧ ಲಖನ್ ಜಾರಕಿಹೊಳಿ ಕಣಕ್ಕಿಳಿಸಲು ಸಿದ್ದು ಆಪ್ತ ಸತೀಶ್ ಜಾರಕಿಹೊಳಿ ಸಿದ್ಧತೆ ನಡೆಸಿದ್ದಾರೆ. ಈ ಹೊತ್ತಲ್ಲೇ ಮತ್ತೊಬ್ಬ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಬಿಜೆಪಿಯ ಅಶೋಕ್ ಪೂಜಾರಿ, ಡಿಕೆಶಿಯನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಅಶೋಕ್ ಪೂಜಾರಿ ಪರ ಡಿಕೆ ಲಾಬಿ ನಡೆಸುವ ಸಂಭವವೂ ಇದೆ.

ಇದರ ಬೆನ್ನಲ್ಲೇ ಮತ್ತೆ ಸತೀಶ್ ಜಾರಕಿಹೊಳಿ ಸೈಲೆಂಟ್ ಆಗಿಯೇ ಗುಡುಗಿ ಡಿಕೆಶಿಗೆ ಟಾಂಗ್ ಕೊಟ್ಟಿದ್ದಾರೆ. ಗೋಕಾಕ್‍ನಲ್ಲಿ ಸಹೋದರ ಲಖನ್ ಜಾರಕಿಹೊಳಿಗೆ ಕಾಂಗ್ರೆಸ್‍ನಿಂದ ಟಿಕೆಟ್ ಪಕ್ಕಾ ಆಗಿದೆ. ಇನ್ನೆರಡು ದಿನಗಳಲ್ಲಿ ಟಿಕೆಟ್ ಘೋಷಣೆ ಆಗಲಿದೆ. ಬಿಜೆಪಿಯಲ್ಲಿ ಅಸಮಾಧಾನಗೊಂಡಿರುವ ಅಶೋಕ್ ಪೂಜಾರಿ ಕಾಂಗ್ರೆಸ್‍ಗೆ ಬರೋದಕ್ಕೆ ನಮ್ಮ ಬೆಂಬಲ ಇಲ್ಲ ಅಂತ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಲಖನ್ ಬಿಟ್ಟು ಹೊರಗಿನವರು ಬಂದು ಗೋಕಾಕ್‍ನಲ್ಲಿ ಚುನಾವಣೆ ಮಾಡೋದು ಕಷ್ಟ ಎಂದಿದ್ದಾರೆ.

ಸದ್ಯ ಬೆಳಗಾವಿ ಪಾಲಿಟಿಕ್ಸ್ ಮತ್ತೆ ಸದ್ದು ಮಾಡ್ತಿದ್ದು, ಇಷ್ಟು ದಿನ ಕೂಲ್ ಆಗಿದ್ದ ಕುಂದಾನಗರಿ ರಾಜಕಾರಣದಲ್ಲಿ ಈಗ ಬಂಡೆ ಎಂಟ್ರಿಯಾಗುತ್ತಾರೆ ಎನ್ನಲಾಗಿದೆ.

Comments

Leave a Reply

Your email address will not be published. Required fields are marked *