– ದಾರಿಯುದ್ದಕ್ಕೂ ರಂಗೋಲಿ, ಹೂವು
ಬೆಳಗಾವಿ: ಉಗ್ರರ ವಿರುದ್ಧ ಹೋರಾಡಿ ಹುತಾತ್ಮನಾಗಿದ್ದ ವೀರ ಯೋಧ ರಾಹುಲ್ ಸುಳಗೇಕರ್‍ಗಾಗಿ ಇಡೀ ಗ್ರಾಮವೆ ಕಂಬನಿ ಮಿಡಿದಿದೆ. ಯೋಧನ ಪಾರ್ಥೀವ ಶರೀರ ಸಾಗುವ ಮಾರ್ಗದುದ್ದಕ್ಕೂ ಹೂ, ರಂಗೋಲಿಯಿಂದ ಅಲಂಕರಿಸಿ ಗೌರವವನ್ನು ಜನ ಸಲ್ಲಿಸಿದ್ದಾರೆ.
ಗ್ರಾಮಸ್ಥರು ಸಕಲ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸುತ್ತಿದ್ದರೆ, ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ದಾರಿಯುದ್ದಕ್ಕೂ ರಾಹುಲ್ ಸುಳಗೇಕರ್ ‘ಅಮರ್ ರಹೇ ಅಮರ್ ರಹೇ’ ಎಂಬ ಘೋಷಣೆ ಮೊಳಗಿತ್ತು.

ಬೆಳಗಾವಿ ತಾಲೂಕಿನ ಉಚಗಾಂವ ಗ್ರಾಮದ ರಾಹುಲ್ ಸುಳಗೇಕರ್(22) ಯೋಧ ಜಮ್ಮುವಿನ ಪುಂಚ್ ಪ್ರದೇಶದಲ್ಲಿ ಗುರುವಾರ ರಾತ್ರಿ ಉಗ್ರರ ಜೊತೆಗೆ ನಡೆದ ಕಾಳಗದಲ್ಲಿ ವೀರಮರಣ ಹೊಂದಿದ್ದರು. ಇಂದು ಯೋಧನ ಪಾರ್ಥೀವ ಶರೀರ ಬೆಳಗಾವಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿತ್ತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ, ನಗರ ಪೊಲೀಸ್ ಆಯುಕ್ತ ಲೋಕೇಶ ಕುಮಾರ್, ಶಾಸಕರಾದ ಅಭಯ ಪಾಟೀಲ್, ಅನಿಲ್ ಬೆನಕೆ ಗೌರವ ಸಲ್ಲಿಸಿದರು.
ನಂತರ ಹಿಂಡಲಗಾ ಗ್ರಾಮದಿಂದ ಯೋಧನ ಸ್ವಗ್ರಾಮ ಉಚಗಾವಿ ವರೆಗೆ ಭವ್ಯ ಮರವಣಿಗೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಾವಿರಾರು ಜನ ಪಾಲ್ಗೊಂಡು ಗೌರವ ಸಲ್ಲಿಸಿದರು. ಯೋಧನ ಪಾರ್ಥಿವ ಶಶೀರ ಸಾಗುವ ರಸ್ತೆಯುದ್ದಕ್ಕೂ ಮಹಿಳೆಯರು ರಂಗೋಲಿ ಬಿಡಿಸಿದ್ದರು. ತ್ರೀವರ್ಣ ಧ್ವಜ ಹೋಲುವ ಹೂವಿನ ಅಲಂಕಾರ ಮಾಡಲಾಗಿತ್ತು. ರಜೆ ಇದ್ದರೂ ಮಕ್ಕಳು ಶಾಲಾ ಸಮವಸ್ತ್ರದಲ್ಲಿ ಬಂದು ವೀರ ಯೋಧ ಅಮರ್ ರಹೇ ಅಮರ್ ರಹೇ ಎಂದು ಘೋಷಣೆ ಕೂಗಿದರು.

ಯೋಧನ ಅಂತ್ಯಕ್ರಿಯೆ ವೇಳೆಯಲ್ಲಿ ಮರಾಠ ಲಘು ಪದಾತಿದಳ ಸೈನಿಕರು ಗಾಳಿಯಲ್ಲಿ 3 ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಿದರು. ಕೇಂದ್ರ ಸಚಿವ ಸುರೇಶ್ ಅಂಗಡಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಅನಿಲ್ ಬೆನಕೆ ಸೇರಿ ಅನೇಕರು ಪಾಲ್ಗೊಂಡು ಗೌರವ ಸಲ್ಲಿಸಿದರು.
ಮೊದಲ ಪ್ರಯತ್ನದಲ್ಲೇ ಸೇನೆ ಸೇರ್ಪಡೆ
ವೀರಯೋಧ ರಾಹುಲ್ ಸುಳಗೇಕರ್ ಮೊದಲ ಪ್ರಯತ್ನದಲ್ಲಿಯೇ ಸೇನೆ ಸೇರಿದ್ದರು. 2015ರ ಮರಾಠ ಲಘು ಪದಾತಿ ದಳದಲ್ಲಿ ಸೇರಿ ರಾಜಸ್ಥಾನದಲ್ಲಿ ತರಬೇತಿ ಪಡೆದಿದ್ದರು. ಅಲ್ಲಿಂದ ಸ್ವಲ್ಪ ತಿಂಗಳಗಳ ಬಳಿಕ ಜಮ್ಮುವಿನ ಕೃಷ್ಣಾ ಘಾಟಿಯಲ್ಲಿಯೇ ಗಡಿ ಕಾವಲಿಗೆ ನಿಯೋಜನೆಗೊಂಡಿದ್ದರು. ಗುರುವಾರ ರಾತ್ರಿ ಜಮ್ಮುವಿನ ಪೂಂಚ್ ಪ್ರದೇಶದಲ್ಲಿ ಉಗ್ರರ ಜತೆಗೆ ನಡೆದ ಗುಂಡಿನ ಚಕಮಕಿಯಲ್ಲಿ ವೀರ ಮರಣ ಹೊಂದಿದ್ದರು.

ರಾಹುಲ್ ಸುಳಗೇಕರ್ ಅವರ ಇಡೀ ಕುಟುಂಬವೇ ದೇಶ ಸೇವೆಗೆ ನಿಂತಿದೆ. ರಾಹುಲ್ ತಂದೆ ಬೈರು ಸುಳಗೇಕರ್ ಭಾರತೀಯ ಸೇನೆಯಲ್ಲಿ 19 ವರ್ಷಗಳಿಂದ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು. ತಮ್ಮ ಇಬ್ಬರು ಮಕ್ಕಳಾದ ರಾಹುಲ್, ಮಯೂರ್ ಸಹ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇದೀಗ ಓರ್ವ ಮಗ ವೀರ ಮರಣಹೊಂದಿದ್ದು, ಇಡೀ ಕುಟುಂಬಕ್ಕೆ ದೊಡ್ಡ ಆಘಾತವನ್ನು ಉಂಟುಮಾಡಿದೆ.

ರಾಹುಲ್ ಸುಳಗೇಕರ್ ಈ ಬಾರಿ ದೀಪಾವಳಿ ಹಬ್ಬಕ್ಕೆ ಮನೆಗೆ ಬಂದಿರಲಿಲ್ಲ. ಇದನ್ನು ಗಮನಿಸಿದ ತಾಯಿ 4 ದಿನಗಳ ಹಿಂದೆ ಸಿಹಿ ತಿನಿಸು ತಯಾರಿಸಿ ಮಗನಿಗಾಗಿ ಇಟ್ಟಿದ್ದರು. ಆದರೆ ಈ ತಿಂಡಿ ಆತನ ಕೈ ಸೇರುವ ಮೊದಲೇ ತಾಯಿಗೆ ಮಗನ ಸಾವಿನ ಕಹಿ ಸುದ್ದಿ ಸಿಕ್ಕಿದೆ.

Leave a Reply