ದೇವರನ್ನೂ ಬಿಡದ ಮಾಲಿನ್ಯ – ವಾರಾಣಾಸಿಯಲ್ಲಿ ಮಾಸ್ಕ್ ತೊಟ್ಟ ಭಗವಂತ

ವಾರಾಣಾಸಿ: ದೆಹಲಿ, ಪಂಜಾಬ್, ನೋಯ್ಡಾ, ಉತ್ತರ ಪ್ರದೇಶದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯದಿಂದ ಜನರು ಉಸಿರಾಡಲು ಕಷ್ಟಪಡುತ್ತಿದ್ದಾರೆ. ಕೇವಲ ಮನುಷ್ಯ ಮಾತ್ರವಲ್ಲ ದೇವರಿಗೂ ಈ ಮಾಲಿನ್ಯ ಉಸಿರುಗಟ್ಟಿಸಿದ್ದು, ಭಗವಂತನ ರಕ್ಷಣೆಗಾಗಿ ಪೂಜಾರಿಗಳು ದೇವರ ಮೂರ್ತಿಗಳಿಗೆ ಮಾಸ್ಕ್ ಹಾಕಿ ಪೂಜಿಸುತ್ತಿದ್ದಾರೆ.

ಹೌದು. ವಿಚಿತ್ರ ಎನಿಸಿದರು ಇದು ಸತ್ಯ. ಭಾರತ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಒಂದಾದ ವಾರಾಣಾಸಿಯಲ್ಲಿ ವಾಯುಮಾಲಿನ್ಯ ಮಿತಿಮೀರಿದ್ದು, ಇಲ್ಲಿ ಜನರು ಮಾತ್ರವಲ್ಲ ದೇವರು ಕೂಡ ಮಾಸ್ಕ್ ಧರಿಸುತ್ತಿದ್ದಾನೆ. ಮಾಲಿನ್ಯದಿಂದ ರಕ್ಷಿಸಲು ಇಲ್ಲಿನ ದೇಗುಲಗಳಲ್ಲಿ ಪೂಜಾರಿಗಳು ದೇವರ ಮೂರ್ತಿಗೆ ಮಾಸ್ಕ್ ಹಾಕಿದ್ದಾರೆ. ಮೂಗು, ಬಾಯಿ ಮುಚ್ಚಿಕೊಂಡು ಮಾಸ್ಕ್ ತೊಟ್ಟ ದೇವರ ದರ್ಶನವನ್ನೇ ಭಕ್ತರು ಪಡೆಯಬೇಕಾದ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿದೆ.

ವಾರಾಣಾಸಿಯಲ್ಲಿಯ ಶಿವ-ಪಾರ್ವತಿ, ಆಂಜನೇಯ, ರಾಮ ಲಕ್ಷಣ ದೇವಾಲಯಗಳಲ್ಲಿ ಈ ರೀತಿ ಮಾಸ್ಕ್ ತೊಟ್ಟ ದೇವರನ್ನು ಕಾಣಬಹುದಾಗಿದೆ. ಈ ಬಗ್ಗೆ ಪೂಜಾರಿಗಳನ್ನ ಕೇಳಿದರೆ, ದೇವರಿಗೆ ವಿಶೇಷ ದಿನಗಳಲ್ಲಿ, ಹಬ್ಬದ ಸಮಯದಲ್ಲಿ ಹೊಸ ಬಟ್ಟೆ ಹಾಕಿ ಅಲಂಕರಿಸುತ್ತೇವೆ. ಅದೇ ರೀತಿ ನಗರದಲ್ಲಿ ಮಾಲಿನ್ಯ ಹೆಚ್ಚಾಗಿರುವುದಕ್ಕೆ ಅದರಿಂದ ರಕ್ಷಿಸಲು ಈ ರೀತಿ ಮೂರ್ತಿ ಮುಖಕ್ಕೆ ಬಟ್ಟೆ, ಮಾಸ್ಕ್ ಕಟ್ಟಿದ್ದೇವೆ ಎಂದಿದ್ದಾರೆ.

ಪ್ರಸಿದ್ಧ ಪುಣ್ಯಕ್ಷೇತ್ರವಾದ ವಾರಾಣಾಸಿಯಲ್ಲಿನ ದೇಗಾಲಯಗಳಲ್ಲಿ ದೇವರ ಮೂರ್ತಿಗಳನ್ನು ಜೀವಂತ ವಿಗ್ರಹದಂತೆ ಪರಿಗಣಿಸಿ, ಪೂಜಿಸಲಾಗುತ್ತದೆ. ಇಲ್ಲಿನ ದೇವರ ಮೂರ್ತಿಗಳನ್ನು ಚೆನ್ನಾಗಿ ನೋಡಿಕೊಳ್ಳಲಾಗುತ್ತೆ. ಹೀಗಾಗಿ ಬೇಸಿಗೆಯಲ್ಲಿ ಇಲ್ಲಿನ ದೇವರ ವಿಗ್ರಹಗಳು ತಂಪಾಗಿಡಲು ಶ್ರೀಗಂಧವನ್ನು ಹಚ್ಚಲಾಗುತ್ತದೆ. ಚಳಿಗಾಲದಲ್ಲಿ ಉಣ್ಣೆ ಬಟ್ಟೆಗಳಿಂದ ದೇವರನ್ನು ಅಲಂಕರಿಸಿ ಚಳಿಯಿಂದ ರಕ್ಷಿಸಲಾಗುತ್ತದೆ. ಅದೇ ರೀತಿ ಮಾಲಿನ್ಯದಿಂದ ರಕ್ಷಿಸಲು ಈ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಅರ್ಚಕರೊಬ್ಬರು ತಿಳಿಸಿದ್ದಾರೆ.

ದೀಪಾವಳಿ ಬಳಿಕ ವಾರಾಣಾಸಿಯಲ್ಲಿ ಮಾಲಿನ್ಯ ಪ್ರಮಾಣ 2.5 ಪಿಎಂ ಮಟ್ಟಕ್ಕೆ ತಲುಪಿದೆ. ಇತ್ತ ಉತ್ತರ ಪ್ರದೇಶದಲ್ಲಿ ವಾಯುಮಾಲಿನ್ಯ ಮಟ್ಟ ಹೆಚ್ಚಿರುವ ಹಿನ್ನೆಲೆ ಸಿಎಂ ಯೋಗಿ ಆದಿತ್ಯನಾಥ್ ಮಾಲಿನ್ಯ ನಿಯಂತ್ರಣಕ್ಕೆ ದೆಹಲಿ ಸರ್ಕಾರ ಜಾರಿಗೆ ತಂದಿರುವಂತೆ ಸಮ-ಬೆಸ ಸಂಖ್ಯೆಗಳ ವಾಹನಸಂಚಾರವನ್ನು ಲಕ್ನೋದಲ್ಲಿ ಅಳವಡಿಸಿಕೊಳ್ಳುವ ಕುರಿತು ಅಧಿಕಾರಿಗಳ ಸೂಚಿಸಿದ್ದಾರೆ.

https://twitter.com/Real_Anuj/status/1192027224821469189

ಹಾಗೆಯೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಿತಿಮೀರಿದ ವಾಯುಮಾಲಿನ್ಯ ಸಂಬಂಧ ಹರ್ಯಾಣ, ಪಂಜಾಬ್, ಉತ್ತರ ಪ್ರದೇಶದ ಮುಖ್ಯ ಕಾರ್ಯದರ್ಶಿಗಳಿಗೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿದೆ. ಯಾವುದೇ ದೇಶದಲ್ಲಿ ಕೃಷಿ ತ್ಯಾಜ್ಯ ಸುಡಲು ಸರ್ಕಾರಗಳು ಅನುಮತಿ ಕೊಟ್ಟಿಲ್ಲ. ವಾಯುಮಾಲಿನ್ಯ ತಡೆ ಕ್ರಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸದ ಅಧಿಕಾರಿಗಳು, ರೈತರ ಮೇಲೆ ಗೂಬೆ ಕೂರಿಸ್ತಿದ್ದೀರಾ? ನಿಮಗೆ ನಾಚಿಕೆ ಆಗುದಿಲ್ಲವೇ ಎಂದು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಬುಧವಾರ ತರಾಟೆಗೆ ತೆಗೆದುಕೊಂಡಿತ್ತು.

Comments

Leave a Reply

Your email address will not be published. Required fields are marked *