‘ಮಹಾ’ರಾಷ್ಟ್ರ ಬಿಕ್ಕಟ್ಟು- ಶಿವಸೇನೆ ಜೊತೆ ಮೈತ್ರಿ ಇಲ್ಲವೆಂದ ಪವಾರ್

ಮುಂಬೈ: ಶಿವಸೇನೆಯೊಂದಿಗೆ ನಾವು ಮೈತ್ರಿ ಮಾಡಿಕೊಳ್ಳಲ್ಲ. ಚುನಾವಣೆ ಪೂರ್ವ ಮೈತ್ರಿಯಂತೆ ಬಿಜೆಪಿ ಮತ್ತು ಶಿವಸೇನೆಯೇ ಸರ್ಕಾರ ರಚನೆ ಮಾಡಲಿ. ಜನಾದೇಶದಂತೆ ನಾವು ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುತ್ತೇವೆ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ಸದ್ಯದ ಮಹಾರಾಷ್ಟ್ರ ವಿಧಾನಸಭೆಯ ಅವಧಿ ನವೆಂಬರ್ 8ರಂದು ಅಂತ್ಯವಾಗಲಿದೆ. ಇನ್ನೆರಡು ದಿನಗಳಲ್ಲಿ ಸರ್ಕಾರ ರಚಿಸಲು ಪಕ್ಷಗಳು ಹೊಸ ಹೊಸ ತಂತ್ರಗಳನ್ನು ಪ್ರಯೋಗಿಸುತ್ತಿವೆ. ಇಂದು ಮಧ್ಯಾಹ್ನ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಸುದ್ದಿಗೋಷ್ಠಿ ಕರೆದಿದ್ದರು. ಸುದ್ದಿಗೋಷ್ಠಿಗೂ ಮುನ್ನ ಶರದ್ ಪವಾರ್ ನಿವಾಸಕ್ಕೆ ಆಗಮಿಸಿದ ಶಿವಸೇನೆಯ ನಾಯಕ ಸಂಜಯ್ ರಾವತ್ ರಹಸ್ಯ ಮಾತುಕತೆ ನಡೆಸಿದರು.

ಸಂಜಯ್ ರಾವತ್ ಭೇಟಿ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶರದ್ ಪವಾರ್, ಕಳೆದ 25 ವರ್ಷಗಳಿಂದ ಶಿವಸೇನೆ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡು ರಾಜಕಾರಣ ನಡೆಸಿವೆ. ಈಗ ಅವರೇ ಸರ್ಕಾರ ರಚಿಸಲಿ. ಎರಡು ದಿನಗಳಲ್ಲಿ ಸರ್ಕಾರ ರಚನೆ ಆಗದಿದ್ದರೆ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುವ ಸಾಧ್ಯತೆಗಳಿವೆ. ನಾನು ಮುಖ್ಯಮಂತ್ರಿ ಆಗಲು ಹೊರಟಿಲ್ಲ. ಶಿವಸೇನೆಯೂ ನಮ್ಮ ಮುಂದೆ ಯಾವುದೇ ಪ್ರಸ್ತಾಪವನ್ನು ಇರಿಸಿಲ್ಲ. ರಾಜ್ಯಸಭೆಗೆ ಸಂಬಂಧಿಸಿದ ಕುರಿತು ಮಾತನಾಡಲು ಸಂಜಯ್ ರಾವತ್ ಆಗಮಿಸಿದ್ದರು ಎಂದರು.

ಇತ್ತ ಶಿವಸೇನೆಯ ನಾಯಕರಾಗಿರುವ ಸಂಜಯ್ ರಾವತ್, ನಮ್ಮ 50:50 ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಈಗಲೂ ನಮ್ಮ ಬಳಿ ಬಹುಮತವಿದೆ ಎಂದು ಹಳೆ ಮಾತನ್ನು ಪುನರುಚ್ಚರಿಸಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಗೆ ಬಹುಮತ ಸಿಕ್ಕಿತ್ತು. 50:50 ಫಾರ್ಮುಲಾ ಮುಂದಿಟ್ಟ ಶಿವಸೇನೆ ಸಿಎಂ ಸ್ಥಾನಕ್ಕೆ ಪಟ್ಟು ಹಿಡಿದಿದೆ. ಶಿವಸೇನೆ ಫಾರ್ಮುಲಾ ಒಪ್ಪದ ಬಿಜೆಪಿ ಕಾದು ನೋಡುವ ತಂತ್ರಕ್ಕೆ ಮುಂದಾಗಿತ್ತು. ಶಿವಸೇನೆ ಮಾತ್ರ ನಮಗೆ 171ರಿಂದ 175ರ ಶಾಸಕರ ಬೆಂಬಲವಿದ್ದು, ಬಿಜೆಪಿಯೇತರ ಸರ್ಕಾರ ರಚಿಸುತ್ತಿದ್ದೇವೆ ಎಂಬ ಸಂದೇಶವನ್ನು ಒಂದು ವಾರದ ಹಿಂದೆಯೇ ರವಾನಿಸಿತ್ತು.

Comments

Leave a Reply

Your email address will not be published. Required fields are marked *