ಸಬ್ ಇನ್ಸ್‌ಪೆಕ್ಟರ್ ಕೆಲಸದ ಆಮಿಷ – ಪ್ರೀತಿಸುವಂತೆ ಬ್ಲ್ಯಾಕ್ ಮೇಲ್, ಯುವತಿಗೆ 5 ಲಕ್ಷ ರೂ. ವಂಚನೆ

ಬೆಂಗಳೂರು: ಸಬ್ ಇನ್ಸ್‌ಪೆಕ್ಟರ್ ಕೆಲಸ ಕೊಡಿಸುವುದಾಗಿ ನಂಬಿಸಿ ಯುವತಿಗೆ 5 ಲಕ್ಷ ರೂ. ವಂಚಿಸಿರುವ ಘಟನೆ ನಗರದ ಬಗಲಗುಂಟೆಯಲ್ಲಿ ನಡೆದಿದೆ.

ಒಟ್ಟು ಎಂಟು ಆರೋಪಿಗಳು ಈ ಕೃತ್ಯ ಎಸಗಿದ್ದು, ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೇವಿ ಪ್ರಸಾದ್ ಸಾಹೋ, ಮೋಹನ್, ಮೋಹನ್ ತಾಯಿ ರತ್ನಮ್ಮ, ತಂದೆ ರತ್ನಾಕರ ಹೆಗಡೆ, ವಿಜಯಾ ಕರ್ನಾಟಕ ಸಂಘದ ಸತೀಶ್ ಮತ್ತು ನಂಜಪ್ಪ, ನಾರಾಯಣ್ ದಾಸ್ ಜಾಜೂ, ಎಂ.ರಂಗಪ್ಪ ಯುವತಿಗೆ ಬೆದರಿಕೆ ಹಾಕಿ ಸುಲಿಗೆ ಮಾಡಿದ್ದಾರೆ.

ಆರೋಪಿ ದೇವಿಪ್ರಸಾದ್ 5 ಲಕ್ಷ ರೂ. ಹಣ ಪಡೆದು, ಯುವತಿಗೆ ವಂಚಿಸಿದ್ದಾನೆ. ಪ್ರೀತಿಯ ನೆಪದಲ್ಲಿ ಯುವತಿಗೆ ಹತ್ತಿರವಾಗಿದ್ದ ದೇವಿಪ್ರಸಾದ್. ಅದೇ ಸಲಿಗೆಯಲ್ಲಿ ಯುವತಿಗೆ ಪಿಎಸ್‌ಐ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆದಿದ್ದ. ಹಣ ಮರಳಿ ಹಣ ಕೇಳಿದ್ದಕ್ಕೆ ಅಶ್ಲೀಲ ಫೋಟೋ ಫೇಸ್‌ಬುಕ್‌ಗೆ ಹಾಕುತ್ತೇನೆ ಎಂದು ಬೆದರಿಕೆ ಒಡ್ಡಿದ್ದ.

ಪ್ರಕರಣದ ವಿವರ
ಯುವತಿ ಗಂಗಾ(ಹೆಸರು ಬದಲಾಯಿಸಲಾಗಿದೆ) 2016ರಲ್ಲಿ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಅರ್ಜಿ ಹಾಕಿದ್ದರು. ಎ1 ಆರೋಪಿ ದೇವಿ ಪ್ರಸಾದ್ ಸಾಹೋ ಎ7 ಆರೋಪಿ ನಾರಾಯಣ ದಾಸ್ ಜಾಜೂನನ್ನು ಗಂಗಾಗೆ ಪರಿಚಯಿಸಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದಾನೆ. ಇದಕ್ಕಾಗಿ ಮೊದಲ ಹಂತದಲ್ಲಿ ಯುವತಿಯಿಂದ 3.50 ಲಕ್ಷ ರೂ. ಹಾಗೂ ಚಿನ್ನಾಭರಣ, ಲ್ಯಾಪ್‌ಟಾಪ್ ಪಡೆದಿದ್ದಾನೆ. ನಂತರ ಪ್ರೀತಿಸುವಂತೆ ಯುವತಿಗೆ ಕಿರುಕುಳ ನೀಡಿದ್ದಾರೆ.

ಇದರಿಂದ ಬೇಸತ್ತ ಗಂಗಾ ದೇವಿ ಪ್ರಸಾದ್‌ಗೆ ಪರಿಚಿತನಾದ ಎ2 ಆರೋಪಿ ಮೋಹನ್‌ನನ್ನು ಸಂಪರ್ಕಿಸಿ ಹಣ ವಾಪಸ್ ಕೊಡಿಸುವಂತೆ ಮನವಿ ಮಾಡಿದ್ದಾರೆ. ಆರೋಪಿ ಮೋಹನ್, ನಾರಾಯಣ ದಾಸ್ ಜೊತೆ ಮಾತನಾಡಿ ಕೆಲಸ ಕೊಡಿಸುವ ಕುರಿತು ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದ್ದಾನೆ. ಸೆ.4ರಂದು ಪ್ರಮುಖ ಆರೋಪಿ ದೇವಿ ಪ್ರಸಾದ್ ಗಂಗಾಳನ್ನು ಮೆಜೆಸ್ಟಿಕ್ ರೈಲ್ವೆ ನಿಲ್ದಾಣಕ್ಕೆ ಕರೆಸಿ ಕೈ ಹಿಡಿದು ಎಳೆದಾಡಿ ಅವಮಾನಿಸಿದ್ದಾನೆ. ಅಲ್ಲದೆ ಸಂತ್ರಸ್ತೆ ಹೆಸರಲ್ಲಿ ಫೇಸ್‌ಬುಕ್ ಖಾತೆ ತೆರೆದು ತನ್ನೊಂದಿಗೆ ಗಂಗಾ ಇದ್ದ ಫೋಟೋಗಳನ್ನು ಗಂಡನ ಸಂಬಂಧಿಕರ ಫೇಸ್‌ಬುಕ್ ಖಾತೆಗೆ ಕಳುಹಿಸಿದ್ದಾನೆ.

ಈ ಫೋಟೋಗಳನ್ನು ಫೇಸ್‌ಬುಕ್‌ನಿಂದ ತೆಗೆಯಲು 5 ಲಕ್ಷ ರೂ. ನೀಡುವಂತೆ ಎ2 ಆರೋಪಿ ಮತ್ತೆ ಬೇಡಿಕೆ ಇಟ್ಟಿದ್ದಾನೆ. ಈ ಬಗ್ಗೆ ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ದೂರು ನೀಡಿದ್ದಾರೆ.

ಈ ವೇಳೆ ಎ1 ಆರೋಪಿ ದೇವಿ ಪ್ರಸಾದ್ ಗಂಗಾಳನ್ನು ಘಾಟಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮದುವೆಯಾಗಿದ್ದೇನೆ. ಈ ಕುರಿತು ಮದುವೆ ನೋಂದಣಿ ಸಹ ಆಗಿದೆ ಎಂದು ತಿಳಿಸಿದ್ದ. ಈ ಕುರಿತು ನಕಲಿ ಮದುವೆ ಪತ್ರಗಳನ್ನು ಸಹ ಸೃಷ್ಟಿಸಿದ್ದ.

ಎ7 ಆರೋಪಿ ನಾರಾಯಣ ದಾಸ್‌ಗೆ ಸಂತ್ರಸ್ತೆ 2.50 ಲಕ್ಷ ರೂ.ಹಣ ನೀಡದ್ದಕ್ಕೆ ಇಬ್ಬರೂ ಇರುವ ಫೋಟೋಗಳನ್ನು ಮತ್ತೆ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದಾನೆ. ಅಲ್ಲದೆ ವಾಟ್ಸಪ್ ಮೂಲಕ ಅಶ್ಲೀಲ ಚಿತ್ರಗಳನ್ನು ಕಳುಹಿಸಿ ಅವಮಾನಿಸಿದ್ದಾನೆ. ಎ2 ಆರೋಪಿ ಮೋಹನ್ ಹಾಗೂ ಎ3 ಆರೋಪಿ ರತ್ನಮ್ಮ ಸಂತ್ರಸ್ತೆಯಿಂದ ಬಲವಂತವಾಗಿ 1.50 ಲಕ್ಷ ರೂ.ಗಳನ್ನು ಪಡೆದಿದ್ದಾರೆ. ಸಮಸ್ಯೆ ಬಗೆಹರಿಸುತ್ತೇವೆ ಎಂದು ಮತ್ತೆ 2.50 ರೂ.ಗಳನ್ನು ಪಡೆದಿದ್ದಾರೆ. ಇಷ್ಟು ಹಣ ಪಡೆದರೂ ಸಹ ಮತ್ತೆ 2.50 ಲಕ್ಷ ರೂ. ನೀಡುವಂತೆ ಒತ್ತಾಯಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತೆ ತನ್ನ ದೂರಿನಲ್ಲಿ ವಿವರಿಸಿದ್ದಾಳೆ.

Comments

Leave a Reply

Your email address will not be published. Required fields are marked *