ಕನ್ನಡದ ಕೋಟ್ಯಧಿಪತಿಯಲ್ಲಿ ಗೆದ್ದು, ಶಾಲೆಯ ಕಾಂಪೌಂಡ್ ಕಟ್ಟಿಸಲು ಮುಂದಾದ ಬಾಲಕ

ಹಾಸನ: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಗೆದ್ದ ಹಣದಲ್ಲಿ ಶಾಲೆ ಕಾಂಪೌಂಡ್ ಕಟ್ಟಿಸಲು ಮುಂದಾಗಿ ಹಾಸನದ ಸರ್ಕಾರಿ ಶಾಲೆಯ ವಿದ್ಯಾರ್ಥಿ ಎಲ್ಲರ ಮನ ಗೆದ್ದಿದ್ದಾನೆ.

ಮೈಸೂರು ಜಿಲ್ಲೆಯ ಕೆಡಗ ಗ್ರಾಮದ ಬಾಲಕ ತೇಜಸ್ ಪ್ರಸ್ತುತ ಹಾಸನದ ಕಟ್ಟಾಯ ಗ್ರಾಮದಲ್ಲಿನ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಕಟ್ಟಾಯದ ಪ್ರೌಢ ಶಾಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿಯಾಗಿರುವ ತೇಜಸ್, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ನಡೆಸಿಕೊಡುವ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ 6,40,000 ರೂ. ಗೆದ್ದಿದ್ದನು. ಈ ಮೂಲಕ ಶಾಲೆ ಹಾಗೂ ಕೆಡಗ ಗ್ರಾಮದ ಘನತೆ ಹೆಚ್ಚಿಸಿದ ತೇಜಸ್‌ಗೆ ಅಭಿನಂದನೆ ಮಹಾಪೂರ ಹರಿದುಬಂದಿತ್ತು. ಆದರೆ ಈಗ ತೇಜಸ್ ತಾನು ಓದುತ್ತಿರುವ ಶಾಲೆಗೆ ಕಾಂಪೌಂಡ್ ಕಟ್ಟಿಸಲು ತನ್ನ ಬಹುಮಾನದ ಹಣದಲ್ಲಿ ಪಾಲುನೀಡಲು ಮುಂದಾಗಿ ಮಾದರಿಯಾಗಿದ್ದಾನೆ.

ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ತೇಜಸ್, ಕನ್ನಡದ ಕೋಟ್ಯಧಿಪತಿಯಲ್ಲಿ ಭಾಗವಹಿಸಿದ್ದು ಖುಷಿಯಾಗಿದೆ. ಅಲ್ಲಿ ಹಣ ಗೆದ್ದಿದ್ದಕ್ಕಿಂತ, ಹಾಟ್ ಸೀಟ್‌ನಲ್ಲಿ ಕೂತು ಆಟವಾಡಿದ್ದು ಹೆಚ್ಚು ಖುಷಿಯಾಗಿದೆ. ಪುನೀತ್ ರಾಜ್‌ಕುಮಾರ್ ಅವರ ಜೊತೆ ಕೂತಿದ್ದು ನನಗೆ ಹೆಮ್ಮೆಯಾಗುತ್ತಿದೆ ಎಂದು ತನ್ನ ಖುಷಿಯನ್ನು ಹಂಚಿಕೊಂಡಿದ್ದಾನೆ.

ನಮ್ಮ ಶಾಲೆಯಲ್ಲಿನ ಎಲ್ಲಾ ಶಿಕ್ಷಕರು ನನಗೆ ಬಹಳ ಪ್ರೋತ್ಸಾಹ ನೀಡಿದ್ದಾರೆ. ನಮ್ಮ ಶಾಲೆಗೆ ಖಾಸಗಿ ವಾಹಿನಿ ಬಂದು ಪರೀಕ್ಷೆ ಮಾಡಿ ಸ್ಪರ್ಧಿಗಳನ್ನು ಕನ್ನಡದ ಕೋಟ್ಯಧಿಪತಿಗೆ ಆಯ್ಕೆ ಮಾಡುತ್ತೇವೆ ಎಂದಿದ್ದರು. ಆಗ ಶಾಲೆಯಲ್ಲಿ ಪರೀಕ್ಷೆ ಮಾಡಿ, ನಮ್ಮ ಮುಖ್ಯೋಪಾಧ್ಯಾಯರು ಶೇಖರ್ ಸಾರ್ ನನ್ನನ್ನು ಆರಿಸಿ ಬೆಂಗಳೂರಿಗೆ ಆಡಿಷನ್‌ಗೆ ಕಳುಹಿಸಿದ್ದರು.

ನಾನು ಬಸವನಗುಡಿಗೆ ಹೋಗಿ ಆಡಿಷನ್‌ನಲ್ಲಿ ಭಾಗವಹಿಸಿದೆ. ಅಲ್ಲಿ ಮೊದಲು ನಮಗೆ ಪರೀಕ್ಷೆ ಕೊಟ್ಟರು. ಬಳಿಕ 20 ನಿಮಿಷ ಮಾತನಾಡಲು ಹೇಳಿದರು. ನಂತರ 150 ಮಂದಿಯಲ್ಲಿ 6 ಜನರನ್ನು ಆಯ್ಕೆ ಮಾಡಿದರು. ಅವರಲ್ಲಿ ನಾನು ಒಬ್ಬನಾಗಿದ್ದೆ. ಅಲ್ಲಿಂದ ನಾಗರಬಾವಿಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಹೋದೆ. ಆ ರೀತಿ ಕಾರ್ಯಕ್ರಮವನ್ನು ನಾನು ಎಂದೂ ನೋಡಿರಲಿಲ್ಲ. ಅಲ್ಲಿ ವೇದಿಕೆ, ಶೋ ನೋಡಿ ತೊಂಬಾ ಖುಷಿಯಾಯ್ತು ಎಂದು ತನ್ನ ಅನುಭವವನ್ನು ಹಂಚಿಕೊಂಡಿದ್ದಾನೆ.

ತಂದೆ ತಾಯಿಗೆ ನಾನು ಕನ್ನಡದ ಕೋಟ್ಯಧಿಪತಿಯಲ್ಲಿ ಗೆದ್ದಿದ್ದು ಸಂತೋಷವಾಗಿದೆ. ಆದರೆ ದುಡ್ಡು ಗೆದ್ದಿದ್ದೀಯಾ ಅಂತ ಗರ್ವ ಪಡಬೇಡ, ಓದುವುದರ ಬಗ್ಗೆ ಗಮನಕೊಡು ಎಂದು ಹೇಳಿದ್ದಾರೆ. ನನ್ನ ಸ್ನೇಹಿತರು ಕೂಡ ತುಂಬಾ ಖುಷಿಪಟ್ಟಿದ್ದಾರೆ. ಪ್ರತಿ ವರ್ಷ ನಮ್ಮ ಶಾಲೆಯಲ್ಲಿ ಪರಿಸರ ದಿನದಂದು ಅತಿಥಿಗಳನ್ನು ಕರೆಸಿ ಕಾರ್ಯಕ್ರಮ ಮಾಡುತ್ತಾರೆ. ಆಗ ಎಲ್ಲರೂ ಸೇರಿ ಶಾಲೆಯ ಸುತ್ತ ಗಿಡಗಳನ್ನು ನೆಡುತ್ತೇವೆ. ಆದರೆ ದನಕರುಗಳು ಗಿಡಗಳನ್ನು ತಿಂದು ಹಾಳು ಮಾಡುತ್ತೆ. ಈ ಬಾರಿ ಬಾದಾಮಿ ಗಿಡ ನೆಟ್ಟಿದ್ದೇವು, ಒಂದೂ ಉಳಿದಿಲ್ಲ. ಆದರೆ ಕಾಂಪೌಂಡ್ ಕಟ್ಟಿದರೆ ಗಿಡಗಳು ಉಳಿಯುತ್ತೆ. ಹೀಗಾಗಿ ಶಾಲೆಗೆ ಕಾಂಪೌಂಡ್ ಕಟ್ಟಿಸಲು ಸಹಾಯ ಮಾಡುತ್ತಿದ್ದೇನೆ ಎಂದು ತೇಜಸ್ ತಿಳಿಸಿದ್ದಾನೆ.

Comments

Leave a Reply

Your email address will not be published. Required fields are marked *