ಬೆಂಗಳೂರು: ರಾಜ್ಯ ರಾಜಕೀಯ ಅಂಗಳದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪವರ ಆಡಿಯೋ ದೊಡ್ಡ ಸದ್ದು ಮಾಡುತ್ತಿದೆ. ಬಿಜೆಪಿ ಸಭೆಯಲ್ಲಿ ಸಿಎಂ ಮಾತನಾಡಿದ್ದ ಮಾತುಗಳನ್ನು ರೆಕಾರ್ಡ್ ಮಾಡಿಕೊಂಡಿದ್ದು ಯಾರು ಎಂಬುದರ ಬಗ್ಗೆ ಪಕ್ಷದ ಆಂತರಿಕ ತನಿಖೆ ಆರಂಭಗೊಂಡಿದ್ದು, ಮುಖಂಡರು ಮಾತ್ರ ನಾನವನಲ್ಲ, ನಾನವನಲ್ಲ ಎಂದು ಹೇಳುತ್ತಾ ಪ್ರಕರಣದಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇದೇ ಆಡಿಯೋವನ್ನು ಅಸ್ತ್ರವಾಗಿ ಬಳಸಿಕೊಂಡಿರುವ ಕಾಂಗ್ರೆಸ್, ರಾಜ್ಯಪಾಲರಿಗೆ ದೂರು ನೀಡಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ. ಈ ಹಿನ್ನೆಲೆ ಬಿಜೆಪಿ ಹೈಕಮಾಂಡ್ ಆಡಿಯೋ ಮತ್ತು ವಿಡಿಯೋಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡುವಂತೆ ರಾಜ್ಯ ಬಿಜೆಪಿ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರಿಗೆ ಖಡಕ್ ಸಂದೇಶವನ್ನು ರವಾನಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಹುಬ್ಬಳ್ಳಿಯ ಸಭೆಯಲ್ಲಿ ಉತ್ತರ ಕರ್ನಾಟಕದ ಏಳು ಕ್ಷೇತ್ರಗಳ ಮುಖಂಡರು ಮತ್ತು ಪಕ್ಷದ ಹಿರಿಯ ನಾಯಕರು ಭಾಗಿಯಾಗಿದ್ದರು. ಹಾಗಾಗಿ ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರಿಗೆ ತಮ್ಮನ್ನು ವಿಡಿಯೋ ಮಾಡಿದವರ ಗುಂಪಿನಲ್ಲಿ ಸೇರಿಸಿಕೊಂಡರೆ ಹೇಗೆ ಎಂಬ ಆತಂಕ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಏಳು ಕ್ಷೇತ್ರಗಳ ನಾಯಕರು ವಿಡಿಯೋ ಬಿಡುಗಡೆ ಮಾಡಿದವರು ನಾವಲ್ಲ ಎಂದು ಸಿಎಂ ಅವರಿಗೆ ಮನವರಿಕೆ ಮಾಡುವ ಪ್ರಯತ್ನದಲ್ಲಿದ್ದಾರೆ ಎಂದು ಬಿಜೆಪಿಯ ಮೂಲಗಳು ತಿಳಿಸಿವೆ.
ಒಂದು ವೇಳೆ ವಿಡಿಯೋ ಮಾಡಿದವರ ಗುಂಪಿನಲ್ಲಿ ನಮ್ಮ ಹೆಸರು ಸೇರಿದರೆ ಪಕ್ಷದಿಂದ ಉಚ್ಛಾಟಿಸಬಹುದು. ಸ್ಥಳೀಯಮಟ್ಟದಲ್ಲಿಯ ಗೌರವಕ್ಕೆ ಧಕ್ಕೆ ಆಗಬಹುದು. ಭವಿಷ್ಯದಲ್ಲಿ ಪಕ್ಷ ಯಾವುದೇ ಜವಾಬ್ದಾರಿ ಹುದ್ದೆ ನೀಡದಿದ್ದರೆ ಹೇಗೆ ಎಂಬ ಆತಂಕ ಸಭೆಯಲ್ಲಿ ಭಾಗಿಯಾಗಿದ್ದ ನಾಯಕರಲ್ಲಿ ಮನೆ ಮಾಡಿದೆ. ಹೀಗಾಗಿ ಎಲ್ಲರೂ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಯಡಿಯೂರಪ್ಪರನ್ನು ಸಂಪರ್ಕಿಸಿ ಸ್ಪಷ್ಟನೆ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

Leave a Reply