ವಿಡಿಯೋ ಬಗ್ಗೆ ಸಂಪೂರ್ಣ ವರದಿ ಕೊಡಿ- ನಳಿನ್‌ಗೆ ಹೈಕಮಾಂಡ್ ಖಡಕ್ ಸೂಚನೆ

ಬೆಂಗಳೂರು: ಅನರ್ಹ ಶಾಸಕರ ಪ್ರಕರಣದ ವಿಚಾರಣೆ ಮುಗಿದಿದ್ದು, ತೀರ್ಪನ್ನು ಸುಪ್ರೀಂಕೋರ್ಟ್ ಕಾಯ್ದಿರಿಸಿದೆ. ಈ ಹೊತ್ತಲ್ಲೇ ಹುಬ್ಬಳ್ಳಿಯಲ್ಲಿ ನಡೆದ ಸಭೆಯಲ್ಲಿ ಸಿಎಂ ಯಡಿಯೂರಪ್ಪನವರು ಮಾತನಾಡಿರುವ ವಿಡಿಯೋ ಈಗ ಕಾಂಗ್ರೆಸ್‌ಗೆ ಬಹುದೊಡ್ಡ ಅಸ್ತ್ರ ಸಿಕ್ಕಂತಾಗಿದೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಪಕ್ಷದ ಸಭೆಯಲ್ಲಿ ಬಿಎಸ್‌ವೈ ಮಾತಾಡಿದ ವಿಡಿಯೋ ಮಾಡಿದವರು ಯಾರು? ವಿಡಿಯೋ ಮಾಡಿದ್ದಲ್ಲದೇ ಬಹಿರಂಗ ಮಾಡಲು ಅವರಿಗೆಷ್ಟು ಧೈರ್ಯ ಎಂದು ಹೈಕಮಾಂಡ್ ಪ್ರಶ್ನಿಸಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ: ಅನರ್ಹರನ್ನ ಮುಂಬೈನಲ್ಲಿಟ್ಟಿದ್ದು ಶಾ – ಕಾಂಗ್ರೆಸ್‍ಗೆ ಸಿಕ್ತು ಯಡಿಯೂರಪ್ಪ ಆಡಿಯೋ ಅಸ್ತ್ರ

ಪಕ್ಷದ ಶಿಸ್ತು ಅಂದ್ರೆ ಇದೇನಾ..? ವಿಡಿಯೋ ಬಹಿರಂಗ ಮಾಡಿದ್ಯಾರು, ಯಾಕೆ?, ವಿಡಿಯೋ ಮಾಡಿದವರ ಹಿಂದೆ ಯಾವ್ಯಾವ ಕಾಣದ ಕೈಗಳಿವೆ? ಯಡಿಯೂರಪ್ಪರನ್ನು ಗುರಿಯಾಗಿಸಿ ವಿಡಿಯೋ ಲೀಕ್ ಮಾಡಿದ್ದಾರಾ? ಇದರ ಹಿಂದೆ ಹೈಕಮಾಂಡ್‌ಗೆ ಕೆಟ್ಟ ಹೆಸರು ತರುವ ಉದ್ದೇಶ ಇದೆಯಾ? ಯೆ ಕ್ಯಾ ಹೋ ರಹಾ ಹೈ ಕರ್ನಾಟಕ್ ಕೆ ಬಿಜೆಪಿ ಮೆ, ಬತಾವೋ. ಹಂ ಯೆ ಕಾಂಗ್ರೆಸ್ ಲೋಗೋಂಕೋ ಕ್ಯಾ ಜವಾಬ್ ದೇನಾ ಹೈ ಬೋಲೋ ಎಂದು ಹೈಕಮಾಂಡ್ ನಳಿನ್ ಕುಮಾರ್ ಕಟೀಲ್‌ರನ್ನು ಹಿಂದಿಯಲ್ಲೇ ತರಾಟೆಗೆ ತೆಗೆದುಕೊಂಡಿದೆ.

ಬಿಎಸ್‌ವೈ ವಿಡಿಯೋ ಬಗ್ಗೆ ಸಂಪೂರ್ಣ ವರದಿ ಕೊಡಿ. ಪಕ್ಷದ ವಲಯದಲ್ಲೂ ಆಂತರಿಕ ತನಿಖೆ ಆಗಬೇಕು ಎಂದು ನಳಿನ್ ಗೆ ಹೈಕಮಾಂಡ್ ತಾಕೀತು ಮಾಡಿದೆ ಎನ್ನಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್ಸಿಗೆ ಬಿಎಸ್‍ವೈ ಆಡಿಯೋ ಅಸ್ತ್ರ – ಸುಪ್ರೀಂನಲ್ಲಿ ಏನಾಗಬಹುದು?

ವಿಡಿಯೋದಲ್ಲಿ ಬಿಎಸ್‌ವೈ ಹೇಳಿದ್ದೇನು?
ಯಾಕೋ ಇವತ್ತು ನೀವು ಮಾತಾಡಿದಂತ ಧಾಟಿ ಸರ್ಕಾರ ಉಳಿಸೋಕೆ ಇದೆ ಅಂತ ಅನ್ನಿಸುತ್ತಿಲ್ಲ. ರಾಷ್ಟ್ರೀಯ ಅಧ್ಯಕ್ಷರೇ ಮುಂದೆ ನಿಂತು 17 ಜನರು 2-3 ತಿಂಗಳು ಮುಂಬೈನಲ್ಲಿರಿಸಿದ್ದರು. ಅವರೆಲ್ಲರೂ ಕ್ಷೇತ್ರಕ್ಕೂ ಬರಲಿಲ್ಲ. ಹೆಂಡ್ತಿ ಮಕ್ಕಳ ಮುಖ ನೋಡಿರಲಿಲ್ಲ. 3-4 ವರ್ಷ ವಿಪಕ್ಷದಲ್ಲಿ ಇರಬೇಕಾದ ನಮ್ಮನ್ನ ಆಡಳಿತ ಪಕ್ಷಕ್ಕೆ ಬರುವಂತೆ ಮಾಡಿದರು. ನಿಮ್ಮ ಬಾಯಲ್ಲಿ ಅನರ್ಹ ಪರ ಗಟ್ಟಿಯಾಗಿ ನಿಂತುಕೊಳ್ಳುತ್ತೇವೆ ಅನ್ನೋ ಮಾತು ಬರಲಿಲ್ಲ. ಇದನ್ನ ನಾನು ಖಂಡಿತಾ ನಿಮ್ಮಿಂದ ನಿರೀಕ್ಷೆ ಮಾಡಿರಲಿಲ್ಲ. ಐ ಆಮ್ ಸಾರಿ. ನನಗೇನು ಸಿಎಂ ಗಿರಿ ಬೇಕಾಗಿರಲಿಲ್ಲ. ಈಗಾಗಲೇ 3-4 ಬಾರಿ ಸಿಎಂ ಆಗಿದ್ದೇನೆ. ದೊಡ್ಡತನ ಧಾರಾಳತನ, ವಾಸ್ತವ ಸ್ಥಿತಿಯನ್ನ ತಿಳಿಯದೇ ನೀವು ಮಾತಾಡಿದ್ದೀರಾ ಗೋಕಾಕ್ ಬಗ್ಗೆ ನೀವೇಕೆ ಮಾತಾಡಿಲ್ಲ? ಅದರಲ್ಲಿ ಅಂತಹ ವಿಶೇಷ ಏನಿದೆ..? ಅವರನ್ನೆಲ್ಲ ನಂಬಿಸಿ ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂತು ನಾನು ಅಪರಾಧ ಮಾಡಿದ್ದೇನೆ ಅಂತ ಈಗ ಅನ್ನಿಸುತ್ತಿದೆ ಎಂದು ಹುಬ್ಬಳ್ಳಿಯಲ್ಲಿ ನಡೆದ ಸಭೆಯ ವೇಳೆ ಬಿಎಸ್‌ವೈ ಹೇಳಿದ್ದರು. ಈ ವಿಡಿಯೋ ಇದೀಗ ಕಾಂಗ್ರೆಸ್ ಗೆ ಸಿಕ್ಕಿದ್ದು, ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಕೈ ಸಿದ್ಧತೆ ನಡೆಸಿಕೊಂಡಿದೆ.

Comments

Leave a Reply

Your email address will not be published. Required fields are marked *