ಕೇಂದ್ರ, ರಾಜ್ಯ ಸಚಿವರಿದ್ರೂ ಹುಬ್ಬಳ್ಳಿಯಲ್ಲಿ ಎಲ್ಲೆಲ್ಲೂ ಗುಂಡಿಗಳ ದರ್ಶನ

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳಿಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ರಸ್ತೆಗಳೆಲ್ಲ ಹೊಂಡಗಳಾಗಿ ಮಾರ್ಪಟ್ಟಿವೆ. ತಮ್ಮ ಕ್ಷೇತ್ರಗಳ ಬಗ್ಗೆ ಗಮನಹರಿಸಬೇಕಾದ ಜನಪ್ರತಿನಿಧಿಗಳು ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿಲ್ಲ. ಇದರಿಂದ ಬೇಸತ್ತ ಜನಸಾಮಾನ್ಯರು ತಮ್ಮ ನಾಯಕರುಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಹುಬ್ಬಳ್ಳಿಯಲ್ಲಿ ರಸ್ತೆಗಳೆಲ್ಲ ಮಳೆಯಿಂದ ಕೊಚ್ಚಿಹೋಗಿ ಹೊಂಡಗಳಂತಾಗಿವೆ. ರಸ್ತೆಗಳಲ್ಲಿ ಮೊಣಕಾಲುದ್ದ ಗುಂಡಿಗಳಿದ್ದು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿ ಗಲ್ಲಿಯ ರಸ್ತೆಗಳು ಕೂಡ ಹದಗೆಟ್ಟು ಹೋಗಿವೆ. ಇಲ್ಲಿನ ಜನರು ಯಾವಾಗಲೂ ಧೂಳು, ಕೆಸರಿನ ಮಧ್ಯೆ ಮೂಗು ಮುಚ್ಚಿಕೊಂಡೇ ಓಡಾಡುತ್ತಿರುವುದಾಗಿ ವಾಹನ ಚಾಲಕ ಸೋಮಶೇಖರ್ ತಿಳಿಸಿದ್ದಾರೆ.

ಹುಬ್ಬಳ್ಳಿಯ ರಸ್ತೆಗಳನ್ನು ದೂರವಾಣಿ ಸಂಪರ್ಕ, ಕೇಬಲ್, ಪೈಪ್‌ಲೈನ್ ಅಳವಡಿಕೆ ಸೇರಿ ವಿವಿಧ ಕೆಲಸಗಳ ಹೆಸರಿನಲ್ಲಿ ಅಗೆದು ಹಾಳು ಮಾಡಿದ್ದಾರೆ. ಇನ್ನೂ ಕೆಲವೆಡೆಗಳಲ್ಲಿ ಡಾಂಬರ್ ಮಾಡದೇ ರಸ್ತೆಗಳು ತಗ್ಗು ಗುಂಡಿಗಳಿಂದ ಕೂಡಿವೆ. ಇದರಿಂದ ಬೇಸತ್ತ ಜನರು ರಸ್ತೆಗಳಿಗೆ ಅನಾಥ ರಸ್ತೆಗಳೆಂದು ನಾಮಕರಣ ಮಾಡಿ ಫಲಕಗಳನ್ನು ಹಾಕಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಹುಬ್ಬಳ್ಳಿಯು ಮಾಜಿ ಮುಖ್ಯಮಂತ್ರಿ ಶೆಟ್ಟರ್, ಗೃಹ ಸಚಿವ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಕಾರ್ಯ ಕ್ಷೇತ್ರವಾಗಿದೆ. ಇಲ್ಲಿಗೆ ನೂರಾರು ಕೋಟಿ ರೂಪಾಯಿ ಅನುದಾನ ಬಿಡುಗಡೆಯಾದರೂ ರಸ್ತೆಗಳು ಮಾತ್ರ ಯಾಕೆ ಅಭಿವೃದ್ಧಿ ಆಗಿಲ್ಲ ಅಂತ ಇಲ್ಲಿನ ಜನರು ಪ್ರಶ್ನಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *