‘ಕೆ.ಆರ್.ಪುರಂ ಅಭ್ಯರ್ಥಿ ಆಯ್ಕೆಯಲ್ಲಿ ಎಡವಿದೆ’- ಕೆಟ್ಟ ಮೇಲೆ ಬುದ್ಧಿ ಕಲಿತರಾ ಸಿದ್ದರಾಮಯ್ಯ?

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಕೆ.ಆರ್.ಪುರಂ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಣೆ ಮಾಡಿ ಎಂಎಲ್‌ಸಿ ನಾರಾಯಣಸ್ವಾಮಿ ಅವರಿಗೆ ಟಿಕೆಟ್ ನೀಡಿರುವ ಕುರಿತು ಪಕ್ಷದ ಕಾರ್ಯಕರ್ತರು ಸಿದ್ದರಾಮಯ್ಯ ಅವರ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂದು ಕೆಪಿಸಿಸಿ ಕಚೇರಿ ಸಭೆಗೆ ಆಗಮಿಸಿದ್ದ ಕಾರ್ಯಕರ್ತರು, ನಾಯಕರು ಎಂಎಲ್‌ಸಿ ನಾರಾಯಣಸ್ವಾಮಿ ಅವರಿಗೆ ಟಿಕೆಟ್ ಕೊಟ್ಟಿರುವ ಕುರಿತು ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು. 2013ರಲ್ಲಿ ಟಿಕೆಟ್ ಪಡೆದ ಭೈರತಿ ಬಸವರಾಜು ಅವರು ಪಕ್ಷಕ್ಕೆ ದ್ರೋಹ ಬಗೆದರು. ಈಗ ನಾರಾಯಣಸ್ವಾಮಿ ಅವರಿಗೆ ಟಿಕೆಟ್ ನೀಡಿದ್ದೀರಿ ಎಂದು ಸಿದ್ದರಾಮಯ್ಯ ಅವರ ಸಿಟ್ಟಾದರು. ಈ ಹಂತದಲ್ಲಿ ಸಿದ್ದರಾಮಯ್ಯ ಅವರು ಕಾರ್ಯಕರ್ತರನ್ನು ಸಮಾಧಾನ ಪಡಿಸಲು ಮುಂದಾದರು.

ಈ ವೇಳೆ ಕಾರ್ಯಕರ್ತರ ಆಕ್ರೋಶ ಭರಿತ ಪ್ರಶ್ನೆಗಳಿಗೆ ಉತ್ತರಿಸಿದ ಸಿದ್ದರಾಮಯ್ಯ ಅವರು, ಅಭ್ಯರ್ಥಿ ಆಯ್ಕೆಯಲ್ಲಿ ಎಡವಿದ್ದೇವೆ ಎಂದು ಒಪ್ಪಿಕೊಂಡರು. ಅಲ್ಲದೇ ಈಗ ಪಕ್ಷದ ಅಭ್ಯರ್ಥಿ ಬದಲಿಸಿದರೆ ಡ್ಯಾಮೇಜ್ ಆಗುತ್ತೆ ಎಂದರು. ಇದರೊಂದಿಗೆ ಉಪಚುಣಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನಾಯಕರು ಯುದ್ಧಕ್ಕೂ ಮುನ್ನವೇ ಸೋಲೊಪ್ಪಿಕೊಂಡರಾ ಎಂಬ ಅನುಮಾನ ಕಾರ್ಯಕರ್ತರಲ್ಲಿ ಮೂಡಿತು. ಸದ್ಯ ಸಿದ್ದರಾಮಯ್ಯ ಅವರು ತಪ್ಪನ್ನು ಒಪ್ಪಿಕೊಂಡರೂ ಕೂಡ ಅಭ್ಯರ್ಥಿಯನ್ನು ಬದಲಿಸುವ ಆಯ್ಕೆ ಯಾವುದೇ ಕಾರಣಕ್ಕೂ ಇಲ್ಲ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *