ಜನ ವಿರೋಧ ಪಕ್ಷದಲ್ಲಿರಲು ಆದೇಶಿಸಿದ್ದು, ನಾವು ಪಾಲಿಸುತ್ತೇವೆ – ಶರದ್ ಪವಾರ್

ಮುಂಬೈ: ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಹಾಗೂ ಮುಖ್ಯಮಂತ್ರಿ ಖುರ್ಚಿಗಾಗಿ ಪೈಪೋಟಿ ನಡೆಯುತ್ತಿದ್ದು, ರಾಜಕೀಯ ಹೈ ಡ್ರಾಮಾ ಮುಂದುವರಿದಿದೆ.

ಬಿಜೆಪಿಯೊಂದಿಗೆ ಸರ್ಕಾರ ರಚಿಸಲು ಮುಖ್ಯಮಂತ್ರಿ ಹುದ್ದೆ ಬೇಡಿಕೆ ಇಟ್ಟಿರುವ ಶಿವಸೇನೆ ಶರದ್ ಪವಾರ್ ನೇತೃತ್ವದ ಎನ್‍ಸಿಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದರ ಬೆನ್ನಲ್ಲೇ ಇದಕ್ಕೆ ನ್ಯಾಷನಲ್ ಕಾಂಗ್ರೆಸ್ ಪಕ್ಷ(ಎನ್‍ಸಿಪಿ)ದ ಮುಖ್ಯಸ್ಥ ಶರದ್ ಪವಾರ್ ತಕ್ಕ ಉತ್ತರ ನೀಡಿದ್ದು, ಜನ ನಮ್ಮನ್ನು ವಿರೋಧ ಪಕ್ಷದಲ್ಲಿ ಕೂರುವಂತೆ ತಿಳಿಸಿದ್ದಾರೆ. ಹೀಗಾಗಿ ನಾವು ಯಾರೊಂದಿಗೂ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಜನತೆ ನಮಗೆ ಪ್ರತಿಪಕ್ಷ ಸ್ಥಾನದಲ್ಲಿ ಕೆಲಸ ಮಾಡುವಂತೆ ಆದೇಶಿಸಿದ್ದಾರೆ. ಅದರಂತೆ ನಾವು ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಬಿಜೆಪಿ ಮಿತ್ರ ಪಕ್ಷ ಶಿವಸೇನೆ ಎನ್‍ಸಿಪಿ ಜೊತೆ ಕೈ ಜೋಡಿಸುತ್ತದೆ ಎಂಬ ಮಾತುಗಳು ಕೇಳಿಬರುತ್ತಿರುವಾಗಲೇ ಪವಾರ್ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಬಿಜೆಪಿ ಮತ್ತು ಶಿವಸೇನೆ ನಡುವಿನ ಮುಖ್ಯಮಂತ್ರಿ ಹುದ್ದೆಯ ಕುರಿತ ಜಗಳ ಬಾಲಿಶವಾದದ್ದು ಎಂದು ಪವಾರ್ ಇದೇ ವೇಳೆ ಹರಿಹಾಯ್ದಿದ್ದಾರೆ.

ಎನ್‍ಡಿಎ ಸಮ್ಮಿಶ್ರ ಘಟಕಗಳಾದ ಬಿಜೆಪಿ ಹಾಗೂ ಶಿವಸೇನೆ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ 288 ಕ್ಷೇತ್ರಗಳ ಪೈಕಿ ಕ್ರಮವಾಗಿ 105 ಹಾಗೂ 56 ಸ್ಥಾನಗಳಲ್ಲಿ ಜಯಗಳಿಸಿವೆ. ಎನ್‍ಸಿಪಿ ಹಾಗೂ ಕಾಂಗ್ರೆಸ್ ಎರಡೂ ಕ್ರಮವಾಗಿ 54 ಹಾಗೂ 44 ಸ್ಥಾನಗಳಲ್ಲಿ ಗಳಿಸಿವೆ.

ರಾಜ್ಯದಲ್ಲಿ ಸರ್ಕಾರ ರಚಿಸಲು ಶಿವಸೇನೆ ಜೊತೆ ಯಾವುದೇ ಮಾತುಕತೆ ನಡೆಸಿಲ್ಲ, ನಾವು ವಿರೋಧ ಪಕ್ಷದ ಸ್ಥಾನದಲ್ಲೇ ಇರುತ್ತೇವೆ ಎಂದು ಪವಾರ್ ಸ್ಪಷ್ಟಪಡಿಸಿದರು. ನಮಗೆ ಸ್ಪಷ್ಟ ಬಹುಮತವಿಲ್ಲ. ಜನರು ನಮ್ಮನ್ನು ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವಂತೆ ಆದೇಶಿಸಿದ್ದಾರೆ. ನಾವು ಆ ಆದೇಶವನ್ನು ಪಾಲಿಸುತ್ತೇವೆ. ಆ ಪಾತ್ರವನ್ನು ಪರಿಣಾಮಕಾರಿಯಾಗಿ ನಾವು ನಿರ್ವಹಿಸುತ್ತೇವೆ ಎಂದರು.

ಮುಖ್ಯಮಂತ್ರಿ ಹುದ್ದೆಯ ಕುರಿತು ಬಿಜೆಪಿಯೊಂದಿಗೆ ಶಿವಸೇನೆ ಜಗಳವಾಡುತ್ತಿರುವ ಸಂದರ್ಭಲ್ಲಿ, ನಾವು ಬಯಸಿದಂತೆ ಸ್ಥಿರ ಸರ್ಕಾರವನ್ನು ರಚಿಸಬಹುದು ಎಂದು ಶಿವಸೇನೆ ಹಿರಿಯ ನಾಯಕ ಸಂಜಯ್ ರಾವತ್ ಹೇಳಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ಪವಾರ್ ಈ ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಶಿವಸೇನೆ ನಿರ್ಧರಿಸಿದರೆ ರಾಜ್ಯದಲ್ಲಿ ಸ್ಥಿರ ಸರ್ಕಾರ ರಚಿಸಲು ಅಗತ್ಯ ಸಂಖ್ಯೆಯನ್ನು ಪಡೆಯುತ್ತದೆ. ಮಹಾರಾಷ್ಟ್ರದ ಜನತೆ 50:50 ಸೂತ್ರದ ಆಧಾರದ ಮೇಲೆ ಸರ್ಕಾರ ರಚಿಸಲು ಆದೇಶ ನೀಡಿದ್ದಾರೆ ಎಂದು ರಾವತ್ ಶುಕ್ರವಾರ ಮುಂಬೈನಲ್ಲಿ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *