ಕರ್ತಾರ್‌ಪುರ್ ಕಾರಿಡಾರ್ – ಯಾತ್ರಿಗಳ ಎರಡು ಪ್ರಮುಖ ಬೇಡಿಕೆ ಈಡೇರಿಸಿದ ಇಮ್ರಾನ್ ಖಾನ್

ಇಸ್ಲಾಮಾಬಾದ್: ಕರ್ತಾರ್‌ಪುರ್ ಕಾರಿಡಾರ್ ಮೂಲಕ ಪವಿತ್ರ ಸಾಹಿಬ್ ಭೇಟಿ ನೀಡು ಸಿಖ್ ಯಾತ್ರಿಗಳ ಪ್ರಮುಖ ಎರಡು ಬೇಡಿಕೆಯನ್ನು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಈಡೇರಿಸಿದ್ದಾರೆ.

ಸಿಖ್ ಯಾತ್ರಾರ್ಥಿಗಳು ಪಾಸ್‍ಪೋರ್ಟ್ ಹೊಂದುವ ಅಗತ್ಯವಿಲ್ಲ, ಅಲ್ಲದೆ 10 ದಿನ ಮುಂಚಿತವಾಗಿ ನೋಂದಾಯಿಸಿಕೊಳ್ಳಬೇಕಿಲ್ಲ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದಾರೆ.

ನವೆಂಬರ್ 8ರಂದು ನಡೆಯಲಿರುವ ಕರ್ತಾರ್‌ಪುರ್ ಕಾರಿಡಾರ್ ಪ್ರಾರಂಭದ ದಿನದಂದು ಭಾರತೀಯ ಯಾತ್ರಾರ್ಥಿಗಳಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ. ಅಲ್ಲದೆ ಪಾಸ್‍ಪೋರ್ಟ್ ಅಗತ್ಯ ಸಹ ಇಲ್ಲ ಎಂದು ಟ್ವೀಟ್ ಮಾಡುವ ಮೂಲಕ ಸ್ಪಷ್ಟಪಡಿಸಿದ್ದಾರೆ.

ಭಾರತದಿಂದ ಕರ್ತಾರ್‌ಪುರಕ್ಕೆ ತೀರ್ಥಯಾತ್ರೆಗೆ ಬರುವ ಸಿಖ್ ಪಂಗಡದ ಎರಡು ಪ್ರಮುಖ ಬೇಡಿಕೆಯನ್ನು ಈಡೇರಿಸಿದ್ದೇನೆ. ಯಾತ್ರಾರ್ಥಿಗಳಿಗೆ ಪಾಸ್‍ಪೋರ್ಟ್ ಅಗತ್ಯವಿಲ್ಲ, ಕೇವಲ ಮಾನ್ಯತೆ ಇರುವ ಗುರುತಿನ ಚೀಟಿ ಇದ್ದರೆ ಸಾಕು. ಇನ್ನು ಮುಂದೆ 10 ದಿನ ಮುಂಚಿತವಾಗಿ ನೋಂದಾಯಿಸಿಕೊಳ್ಳಬೇಕಿಲ್ಲ. ಅಲ್ಲದೆ ಗುರೂಜಿಯ 550ನೇ ಜನ್ಮ ದಿನಾಚರಣೆ ಅಂಗವಾಗಿ ಉದ್ಘಾಟನಾ ದಿನದಂದು ಭೇಟಿ ನೀಡುವ ಯಾತ್ರಿಗಳಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ ಎಂದು ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದಾರೆ.

ಕರ್ತಾರ್‌ಪುರ್ ಕಾರಿಡಾರ್ ಪಾಕಿಸ್ತಾನದ ಗುರುದ್ವಾರ ಕರ್ತಾರ್‌ಪುರ್ ಸಾಹಿಬ್ ಅನ್ನು ಗುರುದಾಸ್‍ಪುರದ ಡೇರಾ ಬಾಬಾ ನಾನಕ್ ದೇವಾಲಯದೊಂದಿಗೆ ಸಂಪರ್ಕಿಸುತ್ತದೆ.

ಪ್ರಧಾನಿ ನರೇಂದ್ರ ಮೋದಿ ನವೆಂಬರ್ 8ರಂದು ಗುರುದಾಸ್‍ಪುರದ ಕಾರಿಡಾರ್ ಉದ್ಘಾಟಿಸಲಿದ್ದಾರೆ. ಅಲ್ಲದೆ ಪ್ರಯಾಣಿಕರ ತಂಗುವ ಕಟ್ಟಡವನ್ನು ಸಹ ಉದ್ಘಾಟನೆ ಮಾಡಲಿದ್ದಾರೆ. ಅತ್ತ ಇಮ್ರಾನ್ ಖಾನ್ ಸಹ ಕರ್ತಾರ್ ಪುರ್ ಕಾರಿಡಾರ್ ಪಾಕ್‍ನಲ್ಲಿ ಉದ್ಘಾಟಿಸಲಿದ್ದಾರೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನರೋವಾಲ್ ಜಿಲ್ಲೆಯಲ್ಲಿನ ಅಂತರಾಷ್ಟ್ರೀಯ ಗಡಿಯಿಂದ ಕೇವಲ ನಾಲ್ಕು ಕಿ.ಮೀ.ದೂರದಲ್ಲಿ ಕರ್ತಾರ್‌ಪುರದ ದರ್ಬಾರ್ ಸಾಹಿಬ್ ಇದೆ. ಈ ಕಾರಿಡಾರ್ ಪಂಜಾಬ್‍ನ ಡೇರಾ ಬಾಬಾ ನಾನಕ್ ದೇಗುಲವನ್ನು ಸಂಪರ್ಕಿಸುತ್ತದೆ. ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ ದೇವ್ ಅವರ ಜೀವನದ ಕೊನೆಯ 18 ವರ್ಷಗಳನ್ನು ಈ ಸ್ಥಳದಲ್ಲಿ ಕಳೆದಿದ್ದಾರೆ ಎಂಬ ನಂಬಿಕೆ ಇದೆ.

ಸಿಖ್ ಯಾತ್ರಾರ್ಥಿಗಳ ಮೇಲೆ ಪಾಕಿಸ್ತಾನ 20 ಡಾಲರ್(1,400 ರೂ.) ಸೇವಾ ಶುಲ್ಕ ವಿಧಿಸುತ್ತಿರುವುದನ್ನು ಭಾರತ ಆಕ್ಷೇಪಿಸಿದೆ. ಈ ಕುರಿತು ಭಿನ್ನಾಭಿಪ್ರಾಯ ವ್ಯಕ್ತವಾದ ಹಿನ್ನೆಲೆ ಆನ್‍ಲೈನ್ ನೋಂದಣಿ ಕಾರ್ಯ ಸಹ ತಡವಾಗಿ ಪ್ರಾರಂಭವಾಯಿತು.

ಇದೀಗ ಮೊದಲ ದಿನ ಶುಲ್ಕವನ್ನು ಪಡೆಯದಿರಲು ಪಾಕ್ ನಿರ್ಧರಿಸಿದೆ. ಪ್ರತಿ ಯಾತ್ರಾರ್ಥಿಗಳಿಗೆ 1,400 ರೂ. ಶುಲ್ಕವನ್ನು ಪಾಕಿಸ್ತಾನ ನಿಗದಿ ಪಡಿಸಿದೆ. ಅಂತಿಮ ಒಪ್ಪಂದದ ಪ್ರಕಾರ ವೀಸಾ ಇಲ್ಲದೆ ಪ್ರತಿ ದಿನ 5 ಸಾವಿರ ಯಾತ್ರಾರ್ಥಿಗಳನ್ನು ಗುರುದ್ವಾರಕ್ಕೆ ಬಿಡಲು ನಿರ್ಧರಿಸಲಾಗಿದೆ. ಬೆಳಗ್ಗೆ ಭೇಟಿ ನೀಡಿ, ಸಂಜೆ ಮರಳಿ ಬರಬಹುದಾಗಿದೆ. ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಯಾತ್ರಾರ್ಥಿಗಳು ಗರಿಷ್ಠ 11 ಸಾವಿರ ರೂ. ಕೊಂಡೊಯ್ಯಬಹುದು. 7 ಕೆ.ಜಿ. ಲಗೇಜ್ ತೆಗೆದುಕೊಂಡು ಹೋಗಲು ಅನುಮತಿ ಸಿಕ್ಕಿದೆ.

Comments

Leave a Reply

Your email address will not be published. Required fields are marked *