ಬೇರಂಬಾಡಿ ಬಳಿ ಸ್ಯಾಟಲೈಟ್ ಬಳಕೆ ಪತ್ತೆ – ಚೆಕ್ ಪೋಸ್ಟ್‌ಗಳಲ್ಲಿ ತೀವ್ರ ಕಟ್ಟೆಚ್ಚರ

ಚಾಮರಾಜನಗರ: ಕೇರಳದಲ್ಲಿ ನಾಲ್ವರು ನಕ್ಸಲರ ಹತ್ಯೆ ಹಿನ್ನೆಲೆಯಲ್ಲಿ ಚಾಮರಾಜನಗರದ ಗಡಿಭಾಗದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ಗಡಿಭಾಗದ ಬಂಡೀಪುರ ಅರಣ್ಯಕ್ಕೆ ನಕ್ಸಲರು ನುಸುಳುವ ಸಾಧ್ಯತೆಗಳಿರುವುದರಿಂದ ಕರ್ನಾಟಕ ಕೇರಳ ಗಡಿಭಾಗದ ಮೂಲೆಹೊಳೆ ಹಾಗೂ ಕರ್ನಾಟಕ ತಮಿಳುನಾಡು ಗಡಿಭಾಗದ ಕೆಕ್ಕನಹಳ್ಳ ಬಳಿ ನಕ್ಸಲ್ ನಿಗ್ರಹದಳ ಹಾಗೂ ಜಿಲ್ಲಾ ಪೊಲೀಸರಿಂದ ಜಂಟಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಪೊಲೀಸರಿಂದ ಗುಂಡಿನ ದಾಳಿ – ಮೂವರು ಮಾವೋವಾದಿಗಳು ಹತ್ಯೆ

ನಕ್ಸಲ್ ನಿಗ್ರಹದಳದ ಜೊತೆಗೆ ಜಿಲ್ಲಾ ಪೊಲೀಸ್‍ನ 10 ಮಂದಿ ಕಮಾಂಡೋಗಳನ್ನು ಕಾರ್ಯಾಚರಣೆಗೆ ನಿಯೋಜನೆ ಮಾಡಲಾಗಿದ್ದು, ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಈ ಮಧ್ಯೆ ಗುಂಡ್ಲುಪೇಟೆ ತಾಲೂಕು ಗಡಿಭಾಗದ ಬೇರಂಬಾಡ ಬಳಿ ಸ್ಯಾಟಲೈಟ್ ಫೋನ್ ಬಳಕೆ ಆಗಿರುವುದು ಕಂಡು ಬಂದಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಎಸ್‍ಪಿ ಆನಂದಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಕೇರಳದಲ್ಲಿ ಮಾವೋವಾದಿಗಳ ಹತ್ಯೆ – ಚಿಕ್ಕಮಗಳೂರಿನ ಇಬ್ಬರು ಸಾವು

ಸ್ಯಾಟಲೈಟ್ ಫೋನ್ ಅನ್ನು ನಕ್ಸಲರು ಬಳಸಿದ್ದಾರೋ ಅಥವಾ ಬೇರೆ ಯಾರಾದರು ಬಳಸಿದ್ದಾರೋ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಇದೂವರೆಗೆ ನಕ್ಸಲರ ಚಟುವಟಿಕೆ ಕಂಡು ಬಂದಿಲ್ಲ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ನಕ್ಸಲರ ಜೊತೆಗೆ ಗಿರಿಜನರು ಕೈ ಜೋಡಿಸದಂತೆ ಮನವಿ ಮಾಡಲಾಗಿದೆ. ಗಿರಿಜನ ಯುವಕರಿಗೆ ಉದ್ಯೋಗಾವಾಕಾಶ ಕಲ್ಪಿಸಲು ಚಿಂತನೆ ನಡೆಸಲಾಗಿದೆ ಎಂದು ಆನಂದಕುಮಾರ್ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *