ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಆಂದೋಲನ, ರಾಹುಲ್ ವಿದೇಶಕ್ಕೆ ಪ್ರಯಾಣ

ನವದೆಹಲಿ: ಒಂದೆಡೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಡೆಸಲು ಯೋಜನೆ ರೂಪಿಸಿದೆ. ಆದರೆ ಇನ್ನೊಂದೆಡೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿದೇಶಕ್ಕೆ ಹಾರಲಿದ್ದಾರೆ ಎಂದು ವರದಿಯಾಗಿದೆ.

ನವೆಂಬರ್ 1ರಿಂದ 8ರ ವರೆಗೆ ದೇಶಾದ್ಯಂತ ಸುಮಾರು 35 ಸುದ್ದಿಗೋಷ್ಠಿಗಳನ್ನು ನಡೆಸಲು ಕಾಂಗ್ರೆಸ್ ಯೋಜನೆ ರೂಪಿಸಿದೆ. ಎನ್‍ಡಿಎ ಅಧಿಕಾರಾವಧಿಯಲ್ಲಿ ಆರ್ಥಿಕತೆಯ ಕಳಪೆ ಸ್ಥಿತಿಯ ಕುರಿತು ರಾಷ್ಟ್ರವ್ಯಾಪಿ ಆಂದೋಲನ ನಡೆಸಲಾಗುತ್ತಿದೆ. ಇದರ ಭಾಗವಾಗಿ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ನವೆಂಬರ್ 5ರಿಂದ 15ರ ವರೆಗೆ ಬೀದಿಗಿಳಿದು ಹೋರಾಟ ನಡೆಸಲು ಮುಂದಾಗಿದ್ದಾರೆ.

ಇದೇ ಸಂದರ್ಭದಲ್ಲಿ ಆದರೆ ಕೋರ್ಸ್‍ಗೆ ಹಾಜರಾಗಲು ರಾಹುಲ್ ಗಾಂಧಿ ವಿದೇಶಕ್ಕೆ ಹಾರುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ನಡೆಸುತ್ತಿರುವ ರಾಷ್ಟ್ರವ್ಯಾಪಿ ಅಂದೋಲನದ ಸಮಯಕ್ಕೆ ಹಾಜರಾಗುವ ಸಾಧ್ಯತೆ ಇಲ್ಲ ಎಂದು ಹೇಳಲಾಗುತ್ತಿದೆ. ರಾಹುಲ್ ಗಾಂಧಿಯವರು ಇಂಡೋನೇಷ್ಯಾಕ್ಕೆ ತೆರಳಬಹುದು ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಆದರೆ ಈ ಕುರಿತು ಖಚಿತಪಡಿಸಲು ಕಾಂಗ್ರೆಸ್ ಮುಖಂಡರು ಹಾಗೂ ಸಿಬ್ಬಂದಿ ನಿರಾಕರಿಸಿದ್ದಾರೆ.

ಅಕ್ಟೋಬರ್ 21ರಂದು ಮಹಾರಾಷ್ಟ್ರ ಹಾಗೂ ಹರ್ಯಾಣದಲ್ಲಿ ನಡೆದ ವಿಧಾನಸಭಾ ಚುನಾವಣೆಗೂ ಮುನ್ನ ರಾಹುಲ್ ಗಾಂಧಿಯವರು ಕಾಂಬೋಡಿಯಾಕ್ಕೆ ಭೇಟಿ ನೀಡಿದ್ದರು. ಅದಾಗ್ಯೂ ಕೊನೆಯ ಹಂತದ ಪ್ರಚಾರದ ಸಂದರ್ಭದಲ್ಲಿ ಮರಳಿದ್ದರು.

2014ರ ಚುನಾವಣೆಗೆ ಹೋಲಿಸಿದರೆ ಈ ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ಉತ್ತಮ ಪ್ರದರ್ಶನ ನೀಡಿದೆ. ಆದರೆ ಈ ಕುರಿತು ರಾಹುಲ್ ಗಾಂಧಿ ಇನ್ನೂ ಪ್ರತಿಕ್ರಿಯಿಸಿಲ್ಲ. ಆದರೆ ಹೆಚ್ಚು ಬಲದಿಂದ ರಾಹುಲ್ ಗಾಂಧಿ ಅವರು ಮತ್ತೆ ರಾಜಕೀಯಕ್ಕೆ ಮರಳಲಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಎ.ಕೆ.ಆ್ಯಂಟನಿ ಇತ್ತೀಚೆಗೆ ತಿಳಿಸಿದ್ದರು.

Comments

Leave a Reply

Your email address will not be published. Required fields are marked *