ನದಿಗೆ ಬಿದ್ದ ಯುವಕ ಪ್ರವಾಹದಲ್ಲಿ 5 ಕಿ.ಮೀ ಈಜಿ ದಡ ಸೇರಿದ

ಯಾದಗಿರಿ: ಕೃಷ್ಣಾ ಮತ್ತು ಭೀಮಾ ನದಿಗಳ ಸಂಗಮದಲ್ಲಿ 5 ಕಿ.ಮೀ ಈಜಿ ದಡ ಸೇರುವ ಮೂಲಕ ಯುವಕನೋರ್ವ ಸಾವು ಗೆದ್ದು ಬಂದಿದ್ದಾನೆ.

ಜಿಲ್ಲೆಯ ವಡಗೇರಾ ತಾಲೂಕಿನ ಶಿವಪೂರ ಗ್ರಾಮದ ಬಸವರಾಜ ಸಾವು ಗೆದ್ದ ಯುವಕ. ಬಸವರಾಜ ವಡಗೇರಾ ಗೋನಾಳ ಬಳಿ ಸಂಗಮ ದೇವಸ್ಥಾನದಲ್ಲಿ ದೀಪಾವಳಿ ಅಮಾವಾಸ್ಯೆ ನಿಮಿತ್ತ ನಡೆಯುವ ಪಲ್ಲಕ್ಕಿ ಮೇಳದ ದರ್ಶನಕ್ಕಾಗಿ ತೆರಳಿದ್ದನು. ನದಿಯ ಪೂಜೆಯ ವೇಳೆ ಬಸವರಾಜ ಆಯ ತಪ್ಪಿ ನದಿಗೆ ಬಿದ್ದಿದ್ದನು.

ನದಿಯ ದಂಡೆಯ ಮೇಲೆ ನಿಂತಿದ್ದ ಭಕ್ತರು ನೋಡ ನೋಡುತ್ತಿದ್ದಂತೆಯೇ ನದಿ ನೀರಿನಲ್ಲಿ ಬಸವರಾಜ ಕೊಚ್ಚಿ ಹೋಗಿದ್ದಾನೆ. ಯುವಕನ ರಕ್ಷಣೆಗೆ ಸ್ಥಳೀಯರು ಮುಂದಾಗಿದ್ದರು. ಆದರೆ ನೀರಿನ ರಭಸ ಹೆಚ್ಚಾಗಿದ್ದರಿಂದ ನದಿಗೆ ಇಳಿಯಲು ಜನರು ಹಿಂದೇಟು ಹಾಕಿದರು. ಸಾಗರದಂತೆ ನೀರು ಹರಿಯುತ್ತಿದ್ದರೂ ಧೃತಿಗೆಡದ ಬಸವರಾಜ ಸುಮಾರು 5 ಕಿ.ಮೀ ನದಿಯಲ್ಲಿ ಈಜುತ್ತಾ ಆಂಧ್ರಪ್ರದೇಶದ ಕೃಷ್ಣಾ ರೈಲ್ವೆ ಬ್ರಿಡ್ಜ್ ಬಳಿ ದಡ ಸೇರಿದ್ದಾನೆ.

5 ಕಿ.ಮೀ ನೀರಿನಲ್ಲಿದ್ದರೂ ಬಸವರಾಜನಿಗೆ ಯಾವುದೇ ಗಾಯವಾಗಿಲ್ಲ ಮತ್ತು ಜೀವಕ್ಕೆ ಯಾವುದೇ ಹಾನಿಯಾಗಿಲ್ಲ. ಆತನನ್ನು ಉಪಚರಿಸಿದ ಆಂಧ್ರ ಪ್ರದೇಶದ ಪೊಲೀಸರು ಬಳಿಕ ವಡಗೇರಾ ಠಾಣೆಗೆ ಮಾಹಿತಿ ನೀಡಿದ್ದಾರೆ. ಬಸವರಾಜ ಬದುಕುಳಿದ ಸುದ್ದಿ ಕೇಳಿ ಸಂಬಂಧಿಕರು, ಪೋಷಕರು ಖುಷಿ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *