ಮುಂಬೈ: ಭಾರತದ ಕ್ರಿಕೆಟ್ ನಿಂಯತ್ರಣ ಮಂಡಳಿ (ಬಿಸಿಸಿಐ) 39ನೇ ಅಧ್ಯಕ್ಷರಾಗಿ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.
ಮುಂಬೈನಲ್ಲಿ ಇಂದು ನಡೆದ ಸಭೆಯಲ್ಲಿ ಗಂಗೂಲಿ ಅಧಿಕಾರ ವಹಿಸಿಕೊಂಡರು. ಅಧ್ಯಕ್ಷ ಸ್ಥಾನಕ್ಕೆ ಗಂಗೂಲಿ ಒಬ್ಬರೆ ನಾಮಪತ್ರ ಸಲ್ಲಿಕೆ ಮಾಡಿದ್ದರಿಂದ ಅವರನ್ನು ಅಧ್ಯಕ್ಷರನ್ನಾಗಿ ಅವಿರೋಧವಾಗಿ ಘೋಷಣೆ ಮಾಡಲಾಗಿದೆ. ಉಳಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾರ ಪುತ್ರ ಜಯ್ ಶಾ ಬಿಸಿಸಿಐ ಕಾರ್ಯದರ್ಶಿಯಾಗಿ ಹಾಗೂ ಕೇಂದ್ರ ಸಚಿವ ಹಾಗೂ ಮಾಜಿ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಸಹೋದರ ಅರುಣ್ ಧುಮಾಲ್ ಖಜಾಂಚಿ, ಮಹಿಮ್ ವರ್ಮಾ ಉಪಾಧ್ಯಕ್ಷರಾಗಿದ್ದಾರೆ.
It's official – @SGanguly99 formally elected as the President of BCCI pic.twitter.com/Ln1VkCTyIW
— BCCI (@BCCI) October 23, 2019
9 ತಿಂಗಳ ಅವಧಿ: ಗಂಗೂಲಿ ಅವರು 2020ರ ಸೆಪ್ಟೆಂಬರ್ ವರೆಗೂ ಅಧಿಕಾರ ನಡೆಸಲಿದ್ದಾರೆ. ಏಕೆಂದರೆ ಹೊಸ ನಿಯಮಗಳ ಅನ್ವಯ ಕೇಂದ್ರ ಅಥವಾ ರಾಜ್ಯ ಸಂಸ್ಥೆಯಲ್ಲಿ ಅಧಿಕಾರದಲ್ಲಿದ್ದವರು ಮುಂದಿನ ಮೂರು ವರ್ಷ ಯಾವುದೇ ಅಧಿಕಾರ ಅನುಭವಿಸುವಂತಿಲ್ಲ. ಗಂಗೂಲಿ ಸದ್ಯ ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದು, ಈ ಹಿಂದೆ ಕಾರ್ಯದರ್ಶಿಯೂ ಆಗಿದ್ದರು. 2015ರಲ್ಲಿ ಗಂಗೂಲಿ ಅವರು ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿ ಅಧಿಕಾರ ಪಡೆದಿದ್ದರು.
ಬಿಸಿಸಿಐ ನೂತನ ಅಧ್ಯಕ್ಷ ಸ್ಥಾನಕ್ಕೆ ಕರ್ನಾಟಕ ರಾಜ್ಯ ಅಸೋಸಿಯೇಷನ್ ಅಧ್ಯಕ್ಷ ಬ್ರಿಜೇಶ್ ಪಾಟೀಲ್ ಹಾಗೂ ಸೌರವ್ ಗಂಗೂಲಿ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಆದರೆ ಆ ಬಳಿಕ ನಡೆದ ನಾಟಕೀಯ ಬೆಳವಣಿಗೆಗಳಲ್ಲಿ ಗಂಗೂಲಿ ಒಬ್ಬರೆ ನಾಮಪತ್ರ ಸಲ್ಲಿಕೆ ಮಾಡಿದ್ದರು.

ಸಿಒಎ ಅವಧಿ ಅಂತ್ಯ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಬಿಸಿಸಿಐ ಆಡಳಿತ ಮಂಡಳಿಯನ್ನು 2017ರಲ್ಲಿ ವಜಾಗೊಳಿಸಿತ್ತು. ಬಳಿಕ ಸುಪ್ರೀಂ ಆಡಳಿತಾತ್ಮಕ ಸಮಿತಿಯನ್ನು ನೇಮಿಸಿತ್ತು. ಇಂದು ಬಿಸಿಸಿಐ ಪದಾಧಿಕಾರಿಗಳಿಗೆ ಆಡಳಿತಾತ್ಮಕ ಸಮಿತಿ ಅಧಿಕಾರ ಹಸ್ತಾಂತರ ಮಾಡಿದ ಪರಿಣಾಮ ಸುಪ್ರೀಂ ಕೋರ್ಟ್ ನೇಮಿಸಿದ್ದ ಆಡಳಿತಾಧಿಕಾರಿಗಳ ಸಮಿತಿಯ 33 ತಿಂಗಳ ಆಡಳಿತ ಅವಧಿ ಅಂತ್ಯವಾಗಿದೆ.
https://twitter.com/ANI/status/1186924846074093568
6 ದಶಕದ ಬಳಿಕ ಕ್ರಿಕೆಟಿಗ ಅಧ್ಯಕ್ಷ:
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ನೂತನ ಅಧ್ಯಕ್ಷರಾಗಿ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅಧಿಕಾರ ವಹಿಸಿಕೊಳ್ಳುವ ಮೂಲಕ ಸರಿ ಸುಮಾರು 6 ದಶಕಗಳ ಬಳಿಕ ಬಿಸಿಸಿಐ ಅಧ್ಯಕ್ಷ ಸ್ಥಾನ ಪಡೆದ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ. 65 ವರ್ಷಗಳ ಹಿಂದೆ ಮಹಾರಾಜ್ ಆಫ್ ವಿಜಯನಗರಂ ಎಂದೇ ಖ್ಯಾತಿ ಪಡೆದಿದ್ದ ವಿಜ್ಜಿ ಅವರು ಬಿಸಿಸಿಐ ಅಧ್ಯಕ್ಷ ಸ್ಥಾನದಲ್ಲಿ ಕಾರ್ಯನಿರ್ವಹಿಸಿದ್ದರು. ವಿವಾದಿತ ಕ್ರಿಕೆಟಿಗ ಎಂದೇ ಕರೆಯಿಸಿಕೊಂಡಿರುವ ವಿಜ್ಜಿ ಅವರು, 1954-56ರ ಅವಧಿಯಲ್ಲಿ ಬಿಸಿಸಿಐ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಆ ಬಳಿಕ ಭಾರತ ಯಾವುದೇ ಕ್ರಿಕೆಟಿಗ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿರಲಿಲ್ಲ. ಸದ್ಯ ಗಂಗೂಲಿ ಅವರು ಈ ಸ್ಥಾನವನ್ನು ಪಡೆದಿದ್ದಾರೆ. ಅಂದಹಾಗೇ ಈ ಹಿಂದೆ ಸುನಿಲ್ ಗವಾಸ್ಕರ್, ಶಿವಲಾಲ್ ಯಾದವ್ ಅವರು ಬಿಸಿಸಿಐ ತಾತ್ಕಾಲಿಕ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.


Leave a Reply