120 ರೂ. ಸಲುವಾಗಿ ಸ್ನೇಹಿತನನ್ನೇ ಥಳಿಸಿ ಕೊಂದ

ಲಕ್ನೋ: 120 ರೂ. ಸಲುವಾಗಿ ನಡೆದ ಸ್ನೇಹಿತರಿಬ್ಬರ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ತನ್ನ ಸ್ನೇಹಿತ 120 ರೂ. ಮರಳಿ ಕೇಳಿದ್ದಕ್ಕೆ ವ್ಯಕ್ತಿಯೊಬ್ಬ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.

ಸ್ನೇಹಿತ 120 ರೂ.ಗಳನ್ನು ಮರಳಿ ನೀಡಿಲ್ಲ ಎಂದು ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಈ ವೇಳೆ ತನ್ನ ಸ್ನೇಹಿತನಿಗೇ ವ್ಯಕ್ತಿ ಮನಬಂದಂತೆ ಥಳಿಸಿದ್ದು, ಸಾವನ್ನಪ್ಪಿದ್ದಾನೆ. ಮೃತನನ್ನು ರಾಮು ಎಂದು ಗುರುತಿಸಲಾಗಿದೆ. ಆರೋಪಿ ಬಿರ್ಜು ಕುಮಾರ್‍ನನ್ನು ಬಂಧಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಾಮು ಅವರ ಮಗ ದಿಲೀಪ್ ಈ ಕುರಿತು ಪ್ರತಿಕ್ರಿಯಿಸಿದ್ದು, ಬಿರ್ಜು ಕುಮಾರ್ ರಾಮು ಅವರಿಂದ ಸಾಲ ಪಡೆದಿದ್ದ. ನಂತರ ಹಣ ಮರಳಿ ನೀಡುವಂತೆ ರಾಮು ಕೇಳಿದಾಗ ಬಿರ್ಜು ನಿಂದಿಸಲು ಪ್ರಾರಂಭಿಸಿದನು. ಇದಕ್ಕೆ ರಾಮು ಆಕ್ಷೇಪ ವ್ಯಕ್ತಪಡಿಸಿದಾಗ ಬಿರ್ಜು ಕುಮಾರ್ ರಾಮು ಅವರನ್ನು ಕೋಲಿನಿಂದ ಮನಬಂದಂತೆ ಥಳಿಸಿದ್ದಾನೆ ಎಂದು ಆರೋಪಿಸಿದ್ದಾರೆ.

ರಾಮು ತಲೆಗೆ ಗಂಭೀರ ಗಾಯಗಳಾಗಿದ್ದು, ಅವರ ಮಗ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ. ಚಿಕಿತ್ಸೆ ಫಲಕಾರಿಯಾಗದೇ ರಾಮು ಸಾವನ್ನಪ್ಪಿದ್ದಾರೆ. ದಿಲೀಪ್ ನೀಡಿದ ಹೇಳಿಕೆಯನ್ನಾಧರಿಸಿ ಪೊಲೀಸರು ಸೆಕ್ಷನ್ 304 ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಕುರಿತು ಇನ್ಸ್‍ಪೆಕ್ಟರ್ ಅಜಯ್ ಮಿಶ್ರಾ ಮಾತನಾಡಿ, ಆರೋಪಿಯನ್ನು ಬಂಧಿಸಲಾಗಿದ್ದು, ಲಖಿಂಪುರ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಎಸ್‍ಡಿಎಂ(ಸಬ್ ಡಿವಿಶನಲ್ ಮ್ಯಾಜಿಸ್ಟ್ರೇಟ್) ಸುನಂದು ಸುಧಾಕರನ್ ಈ ಕುರಿತು ಮಹಿತಿ ನೀಡಿ, ಈ ಪ್ರದೇಶದ ಬಹುತೇಕರು ಬಡತನ ರೇಖೆಗಿಂತ ಕೆಳಗಿರುವವರು ಎಂದು ನಾನು ಗಮನಿಸಿದ್ದೇನೆ. ಹೀಗಾಗಿ ಸರ್ಕಾರಿ ಯೋಜನೆಗಳು ಅಗತ್ಯವಿರುವ ಜನರನ್ನು ತಲುಪುತ್ತಿವೆಯೇ ಎಂಬುದನ್ನು ಗುರುತಿಸಲು ಅಭಿಯಾನ ಪ್ರಾರಂಭಿಸಲು ನಿರ್ಧರಿಸಿದ್ದೇನೆ. ಗ್ರಾಮ ಸಮಾಜದ ಭೂಮಿ ಸ್ಕ್ವಾಟರ್ ಗಳಿಂದ ಮುಕ್ತವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಅಭಿಯಾನ ನಡೆಸುತ್ತೇವೆ. ಕೃಷಿ ಭೂಮಿ ಇಲ್ಲದ ರೈತರಿಗೆ ಈ ಭೂಮಿಯನ್ನು ನೀಡಿ ಕೆಲಸದಲ್ಲಿ ತೊಡಗುವಂತೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *